ಉಡುಪಿಯ ಎಸ್​ಡಿಎಂ ಆಯುರ್ವೇದ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಷ್ಯೋಪನಯನ ಸಮಾರಂಭದಲ್ಲಿ ಡಾ. ಗುರುಬಸವರಾಜ ಮಾತನಾಡಿದರು. ಡಾ. ಮಮತಾ ಕೆ.ವಿ., ಡಾ. ನಾಗರಾಜ್​ ಎಸ್​., ಡಾ.ಪ್ರಶಾಂತ್​, ಡಾ. ಶ್ರೀಕಾಂತ್​, ಡಾ. ರಜನೀಶ್​ ಗಿರಿ ಇತರರಿದ್ದರು. 
ಉಡುಪಿ

ಆಯುರ್ವೇದದಲ್ಲಿ ಸಂಶೋಧನೆಗೆ ವಿಪುಲ ಅವಕಾಶ

ಪ್ರಶಾಂತ ಜಿ. ಭಾಗ್ವತ

* ವೈದ್ಯ ವಿದ್ಯಾರ್ಥಿಗಳಿಗೆ ಡಾ. ಗುರುಬಸವರಾಜ ಕರೆ
* ಎಸ್​ಡಿಎಂ ಕಾಲೇಜಿನಲ್ಲಿ ಶಿಷ್ಯೋಪನಯನ ಸಂಸ್ಕಾರ 

ಉಡುಪಿ: ಪ್ರಸ್ತುತ ಸಮಾಜದಲ್ಲಿ ಆಯುರ್ವೇದದ ಔಷಧೋಪಚಾರ ಹಾಗೂ ಸೇವೆಯ ಕುರಿತಂತೆ ಬಹಳಷ್ಟು ನಿರೀಕ್ಷೆಗಳಿವೆ. ಆ ನಿಟ್ಟಿನಲ್ಲಿ ತಾವುಗಳೆಲ್ಲ ನುರಿತ ಆಯುರ್ವೇದ ವೈದ್ಯರಾಗಬೇಕಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಹಳಷ್ಟು ಸಂಶೋಧನೆಗಳಿಗೆ ಈಗ ವಿಪುಲ ಅವಕಾಶವಿದ್ದು, ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ಕಾಯೋರ್ನ್ಮುಖ ಆಗಬೇಕಿದೆ ಎಂದು ಮೈಸೂರಿನ ಜೆಎಸ್​ಎಸ್​ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಗುರುಬಸವರಾಜ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಧನ್ವಂತರಿ ಹೋಮದೊಂದಿಗೆ ಗುರುವಾರ (ಡಿ.11) ಆಯೋಜಿಸಿದ್ದ 28ನೇ ಶಿಷ್ಯೋಪನಯನ ಸಮಾರಂಭದಲ್ಲಿ ಮಾತನಾಡಿದರು.

ಶ್ರದ್ಧೆ, ಪರಿಶ್ರಮ ಅಗತ್ಯ

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಮಾತನಾಡಿ, ಗುರುಮುಖೇನ ವಿದ್ಯೆ ಕಲಿಯುವ ವಿಧಾನ ಪರಂಪರಾಗತವಾಗಿ ಅನುಸರಿಸಿಕೊಂಡು ಬರಲಾಗಿದೆ. ಪ್ರಸ್ತುತ ದಿನಗಳಲ್ಲೂ ಸಹ ಆಯುರ್ವೇದ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಪರಿಣತ ವೈದ್ಯ ಶಿಕ್ಷಕರ ಮಾರ್ಗದರ್ಶನ ಅಮೂಲ್ಯ ಹಾಗೂ ಅತ್ಯಗತ್ಯವಾಗಿದೆ. ಅಧ್ಯಯನದಲ್ಲಿ ಸತತ ಶ್ರದ್ಧೆ, ಪರಿಶ್ರಮ ಹಾಗೂ ತತ್ಪರತೆ ಹೊಂದಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್​ ಎಸ್​. ಸ್ವಾಗತಿಸಿ, ಶಿಷ್ಯೋಪನಯನ ಸಂಸ್ಕಾರದ ಸದುದ್ದೇಶ ವಿವರಿಸಿದರು. ಆಡಳಿತ ವಿಭಾಗ ಮುಖ್ಯಸ್ಥ ಡಾ.ಪ್ರಶಾಂತ್​, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆ ನೆರವೇರಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್​, ಕಾರ್ಯಕ್ರಮದ ಸಂಯೋಜಕ ಡಾ. ರಜನೀಶ್​ ಗಿರಿ ಉಪಸ್ಥಿತರಿದ್ದರು.
ಸ್ನಾತಕ ವಿಭಾಗದ ಮುಖ್ಯಸ್ಥ, ಡೀನ್​ ಡಾ. ಪ್ರಥ್ವಿರಾಜ್​ ಪುರಾಣಿಕ್​ ವಂದಿಸಿದರು. ಕೌಮರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಕಾವ್ಯಾ ಹಾಗೂ ಆಗಧತಂತ್ರ ವಿಭಾಗದ ಡಾ. ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ನಡೆದ ಧನ್ವಂತರಿ ಹೋಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ಪಾಲ್ಗೊಂಡಿದ್ದರು.