ಕಟ್ಟಿಗೆ ಬಳಸಿ ಅಡುಗೆ ತಯಾರಿಸುತ್ತಿರುವ ಹೋಟೆಲ್ ಸಿಬ್ಬಂದಿ. 
ಉಡುಪಿ

ಅನಿಲ ಕೊರತೆ ಮಧ್ಯೆ ಕಟ್ಟಿಗೆಗೂ ಬರ

ಪುರುಷೋತ್ತಮ ಪೆರ್ಲ ಕಾಸರಗೋಡು
ಜಾಗತಿಕ ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಕೇರಳದ ಜನರು ಕಟ್ಟಿಗೆಗೆ ಮೊರೆ ಹೋಗಿದ್ದು, ಹೆಚ್ಚಿನ ಬೇಡಿಕೆಯಿರುವುದರಿಂದ ಕಟ್ಟಿಗೆಯೂ ಲಭ್ಯವಾಗದೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಸರಗೋಡು ಜಿಲ್ಲೆ ಸಹಿತ ರಾಜ್ಯಾದ್ಯಂತ ಉಂಟಾದ ಗ್ಯಾಸ್ ಪೂರೈಕೆ ಕೊರತೆಯ ಹಿನ್ನೆಲೆಯಲ್ಲಿ ಬಹುತೇಕ ಮಂದಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಟ್ಟಿಗೆ ಕೊರತೆ ಎದುರಾಗುವುದರ ಜತೆಗೆ ಮಾರುಕಟ್ಟೆಗಳಲ್ಲಿ ಕಟ್ಟಿಗೆಗೆ ದರವೂ ದುಪ್ಪಟ್ಟಾಗಿದೆ.
ಕಾಸರಗೋಡು ಜಿಲ್ಲೆಯ ಹಲವೆಡೆ ಹೋಟೆಲ್‌ಗಳು ಒಂದೊಂದೇ ಬಾಗಿಲು ಮುಚ್ಚುತ್ತಿದ್ದು, ಕುಟುಂಬಶ್ರೀ ಸಹಿತ ವಿವಿಧ ಮಹಿಳಾ ಸಂಘಟನೆಗಳು ಮುನ್ನಡೆಸುತ್ತಿರುವ ಹೋಟೆಲ್‌ಗಳಲ್ಲಿ ಒಲೆಯಲ್ಲಿ ತಿಂಡಿ, ಊಟ ತಯಾರಿಸಲಾಗುತ್ತಿದೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ಅನೇಕ ತಿಂಡಿಗಳನ್ನು ಕಡಿತಗೊಳಿಸಲಾಗಿದೆ.

ಕಟ್ಟಿಗೆ ಕೊರತೆಗೆ ಕಾರಣ?

ಜಿಲ್ಲೆಯಿಂದ ಭಾರಿ ಪ್ರವಾಣದಲ್ಲಿ ಮರಗಳನ್ನು ಕಡಿದು ಇತರ ರಾಜ್ಯಗಳಿಗೆ ಸಾಗಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದರಿಂದ ಕಟ್ಟಿಗೆಗೆ ಕೊರತೆಯುಂಟಾಗಿದೆ. ಎಳೆಯ ಮರಗಳನ್ನೂ ಕತ್ತರಿಸಿ ಇತರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಇದೇ ಕಾರಣದಿಂದ ಹೋಟೆಲ್ ಹಾಗೂ ಮನೆಗಳಿಗೆ ಕಟ್ಟಿಗೆ ಲಭ್ಯವಾಗದ ಸ್ಥಿತಿ ಎದುರಾಗಿದೆ. ಅಡುಗೆ ಅನಿಲ ಸಮಸ್ಯೆ ಪ್ರಾರಂಭವಾಗುವುದಕ್ಕೆ ಮೊದಲು ಒಂದು ಲೋಡ್ ಕಟ್ಟಿಗೆಗೆ 3-5 ಸಾವಿರ ರೂ. ದರವಿತ್ತು. ಪ್ರಸ್ತುತ 8 ಸಾವಿರ ರೂ.ಗೆ ಏರಿಕೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳು, ಕುಟುಂಬಗಳಿಗೆ ಭಾರಿ ಸಂಕಷ್ಟ ಎದುರಾಗಿದೆ.

ಗ್ಯಾಸ್ ಅಭಾವದಿಂದ ಕೆಲವು ದಿನಗಳ ತನಕ ಹೋಟೆಲ್ ಬಂದ್ ಮಾಡಲಾಗಿತ್ತಾದರೂ ಗ್ರಾಹಕರ ಒತ್ತಾಯದ ಮೇರೆಗೆ ಮತ್ತೆ ತೆರೆದಿದ್ದೇವೆ. ಆದರೆ ತಿಂಡಿ, ಊಟವನ್ನು ಸೀಮಿತಗೊಳಿಸಿದ್ದೇವೆ. ಹೆಚ್ಚಿನ ಮೊತ್ತ ನೀಡಿ ಗ್ಯಾಸ್ ಖರೀದಿಸಿ ಹೋಟೆಲ್ ಮುನ್ನಡೆಸುವುದು ಕಷ್ಟಸಾಧ್ಯ. ಈ ಮಧ್ಯೆ ಕಟ್ಟಿಗೆ ಬೆಲೆಯಲ್ಲೂ ಭಾರಿ ಏರಿಕೆ ಉಂಟಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.