ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡೋತ್ಸವದಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದ ಆಳ್ವಾಸ್ ಮಲ್ಲಕಂಬ ತಂಡ.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಬೆಂಗಳೂರು ಗ್ರಾಮಾಂತರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಡೆದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಮಲ್ಲಕಂಬ ಕ್ರೀಡೋತ್ಸವದಲ್ಲಿ ಆಳ್ವಾಸ್ ಮಲ್ಲಕಂಬ ತಂಡ ಎರಡೂ ಸ್ಪರ್ಧೆಗಳಲ್ಲಿ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು 14 ವರ್ಷ ವಯೋಮಿತಿಯ ಬಾಲಕಿಯರ ಹಾಗೂ 14 ವಷರ್ ಮೇಲ್ಪಟ್ಟ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ತಂಡ ಪ್ರಶಸ್ತಿ ಗೆದ್ದಿತ್ತು. ಗುಂಪು ವಿಭಾಗದ ಹಗ್ಗ, ಸ್ಥಿರ ಮಲ್ಲಕಂಬ ಹಾಗೂ ಪಿರಮಿಡ್ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು.
ವೈಯಕ್ತಿಕ ವಿಭಾಗದಲ್ಲಿ ವರ್ಷಿಣಿ, ಸಿಂಚನಾ, ಪೂಜಾ, ಸವಿತಾ ಆರ್., ದಿವ್ಯ ಪಿ., ಆಕಾಶ್, ವಿನಾಯಕ್, ಸಂಗಪ್ಪ ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
ಧಾರವಾಡ ಜಿಲ್ಲೆಯಲ್ಲಿ ನಡೆದ ಸ್ಪರ್ಧೆಯಲ್ಲಿಯೂ 14 ವಷರ್ ವಯೋಮಿತಿಯ ಬಾಲಕಿಯರ ಹಾಗೂ 14 ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡ ತಂಡ, ಗುಂಪು ವಿಭಾಗದಲ್ಲಿ ಹಲವು ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಒಂದು ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿತು. ವೈಯಕ್ತಿಕ ವಿಭಾಗದಲ್ಲಿ ಕವನ, ಸ್ಪೂರ್ತಿ, ದಿವ್ಯ, ನಿಂಗವ್ವ, ಆಕಾಶ್, ವಿನಾಯಕ್, ಸಂಗಮೇಶ್ ಪ್ರಶಸ್ತಿ ಪಡೆದರು.
120 ವಿದ್ಯಾರ್ಥಿಗಳನ್ನು ಒಳಗೊಂಡ ಆಳ್ವಾಸ್ ಮಲ್ಲಕಂಬ ತಂಡದ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ. ಕರ್ನಾಟಕ ಅಮೆಚೂರ್ ಮಲ್ಲಕಂಬ ಅಸೋಸಿಯೇಷನ್ ಲಕ್ಷ್ಮೇಶ್ವರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬೆಂಗಳೂರು ಗ್ರಾಮಾಂತರ, ಧಾರವಾಡ ಜಿಲ್ಲಾ ಘಟಕಗಳ ಆಶ್ರಯದಲ್ಲಿ ಸ್ಪರ್ಧೆ ನಡೆಯಿತು.