ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ.
* ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಅನಿಸಿಕೆ
* ಕಾಂಗ್ರೆಸ್ನ ಗೊಡ್ಡು ಬೆದರಿಕೆಗೆ ಹೆದರಲ್ಲ
ಉಡುಪಿ: ಮಣಿಪಾಲದಲ್ಲಿ ಕಾಕ್ರೋಜ್ ನಡೆಸಿದ್ದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆ ಕೂಗಿದವರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳದ ಜಿಲ್ಲಾ ಪೊಲೀಸ್ ಇಲಾಖೆ, ವಿಷಯನಿಷ್ಟ ಮಾತುಗಳನ್ನಾಡಿದ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ನಾತ್ರ ಎಫ್ಐಆರ್ ದಾಖಲಿಸಿರುವುದು ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ನಿದರ್ಶನವಾಗಿದೆ. ರಾಷ್ಟ್ರೀಯವಾದಿ ನಾಯಕ ಯಶ್ಪಾಲ್ರ ಜತೆ ಜಿಲ್ಲೆಯ ಸಮಸ್ತ ದೇಶಭಕ್ತ ಜನರಿದ್ದಾರೆ. ಹೀಗಾಗಿ ಕಾಂಗ್ರೆಸ್ಸಿನ ಯಾವುದೇ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.
ದೆಹಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನೆಪದಲ್ಲಿ ದಾಂಧಲೆ ನಡೆಸಿದ್ದ ದೇಶ ವಿರೋಧಿ ದುಷ್ಟ ಶಕ್ತಿಗಳನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಿ ಬಂಧಿಸುವಲ್ಲಿ ಕೇಂದ್ರ ಗೃಹ ಇಲಾಖೆ ನಿರತವಾಗಿದೆ. ಬಿಜೆಪಿ ಇಂತಹ ನೂರಾರು ಸವಾಲುಗಳನ್ನು ಮೆಟ್ಟಿನಿಂತು ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಉಡುಪಿಯಲ್ಲಿ ಮೊನ್ನೆ ಬಿಜೆಪಿ ನಡೆಸಿದ್ದ ಪ್ರತಿಭಟನೆಯಲ್ಲಿ ಸೇರಿದ್ದ ಜನಸ್ತೋಮ, ಜನ ಬೆಂಬಲ ಕಂಡು ಜಿಲ್ಲೆಯ ಕಾಂಗ್ರೆಸ್ ನಾಯಕರು ಕಂಗೆಟ್ಟಿದ್ದಾರೆ. ರಾತೋರಾತ್ರಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವುದು ಅವರ ಹತಾಶ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ನವೀನ್ ಶೆಟ್ಟಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆ ಯತ್ನ ಸಹಿತ ವಿದೇಶ ಪ್ರವಾಸದಲ್ಲಿದ್ದಾಗ ವಿಪಕ್ಷ ನಾಯಕ ರಾಹುಲ್ ಗಾಂಧಿ ದೇಶ ವಿರೋಧಿ ಹೇಳಿಕೆ ನೀಡುತ್ತಾರೆ. ಇವರಿಗೆ ಕಿಂಚಿತ್ತಾದರೂ ದೇಶಾಭಿಮಾನ ಇದೆಯೇ? ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚಲು ಕರ್ನಾಟಕದಲ್ಲೂ ಜಿರಲೆಗಳ ಜತೆ ಸೇರಿ ಕಾಂಗ್ರೆಸ್ ನಾಯಕರು ಪ್ರಹಸನ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ.
'ರಾಷ್ಟ್ರ ಮೊದಲು' ಎಂಬ ಚಿಂತನೆಯ ಬಿಜೆಪಿಗೆ ದೇಶದ ಏಕತೆ ಮತ್ತು ಸಮಗ್ರತೆಯೇ ಮುಖ್ಯ. ಆ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳದು. ದೇಶದ ಘನತೆ, ಗೌರವಕ್ಕೆ ಚ್ಯುತಿ ಬಂದಾಗ ಆದನ್ನು ಯಾವುದೇ ಬೆಲೆ ತೆತ್ತು ಎದುರಿಸಲೂ ಪಕ್ಷ ಸರ್ವ ಸನ್ನದ್ಧವಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರ ಮೇಲೆ ಮೊಟ್ಟೆ ದಾಳಿ ನಡೆಸಿದ ಕಾಂಗ್ರೆಸ್ಸಿನ ಗೂಂಡಾ ಪ್ರವೃತ್ತಿ ಜಗಜ್ಜಾಹೀರಾಗಿದೆ. ಪ್ರತಿಭಟನೆಯಲ್ಲಿ ಎಂತಹ ಮಾತುಗಳನ್ನಾಡಬೇಕು ಎಂಬ ಪಾಠ ಅವರಿಂದ ನಾವು ಕಲಿಯಬೇಕಿಲ್ಲ. ಜಿರಲೆಗಳಿಗೆ ಬೆನ್ನೆಲುಬಾಗಿರುವ ಕಾಂಗ್ರೆಸ್ಗೆ ದೇಶದ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ನವೀನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿಯ ಜಟ್ಕಾ ಸ್ಟ್ಯಾಂಡ್ ಬಳಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಜು.31ರಂದು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದು ಉಡುಪಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆದರೆ ಅದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯೇ ನೇರ ಹೊಣೆ. ಕಳೆದ ವಾರ ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾದಕ ವ್ಯಸನಿಗಳು, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಇಲ್ಲಿಯೂ ಪಾಳ್ಗೊಳ್ಳಬಹುದು. ಗುಪ್ತಚರ ಇಲಾಖೆ ವಿಶೇಷ ನಿಗಾ ವಹಿಸಬೇಕು.
— ದಿನೇಶ್ ಅಮೀನ್. ಬಿಜೆಪಿ ಉಡುಪಿ ನಗರಾಧ್ಯಕ್ಷ.