ಉಡುಪಿಯ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ನಲ್ಲಿ ಜೆರಾಲ್ಡ್ ಐಸಾಕ್ ಲೋಬೊ ಹೊಸ ತೆನೆಗೆ ಆಶೀರ್ವಚಿಸಿ ಪವಿತ್ರ ಬಲಿಪೂಜೆ ನೆರವೇರಿಸಿದರು. ಚರ್ಚ್ನ ರೆಕ್ಟರ್ ಡಾ.ಬ್ಯಾಪ್ಟಿಸ್ಟ್ ಮಿನೇಜಸ್ ಹಾಗೂ ಇತರರಿದ್ದರು.
* ನಿವೃತ್ತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಂದೇಶ
* ಉಡುಪಿಯಲ್ಲಿ ಕ್ರೈಸ್ತರಿಂದ ಮರಿಯಮ್ಮಳ ಜನ್ಮದಿನ ಆಚರಣೆ
ಉಡುಪಿ: ಪವಿತ್ರ ಕನ್ಯಾಮರಿಯಮ್ಮಳ ಜನ್ಮದಿನದ ಮೊಂತಿ ಹಬ್ಬವು ಧಾರ್ಮಿಕ ಮಹತ್ವದೊಂದಿಗೆ ಕೃತಜ್ಞತೆ, ಕುಟುಂಬ, ಹಂಚಿಕೆ ಮತ್ತು ಪರಸ್ಪರ ಕಾಳಜಿಗಳ ಸಾರ್ವತ್ರಿಕ ಮೌಲ್ಯ ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾಗಿದೆ. ಈ ಆಚರಣೆಯು ಭೂಮಿಯೊಂದಿಗೆ ನಮ್ಮ ಸಂಬಂಧದ ಸೂಚಕವಾಗಿದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಮತ್ತು ರೈತರ ದುಡಿಮೆಯ ಪರಿಶ್ರಮದ ಸಂಕೇತವಾಗಿದೆ ಎಂದು ನಿವೃತ್ತ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ನುಡಿದರು.
ಉಡುಪಿ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ಮೊಂತಿ ಹಬ್ಬದ ನಿಮಿತ್ತ ಮಂಗಳವಾರ (ಸೆ.8) ಆಯೋಜಿಸಿದ್ದ ಮಾತೆ ಮೇರಿ ಹುಟ್ಟುಹಬ್ಬ ಹಾಗೂ ತೆನೆ ಹಬ್ಬದಲ್ಲಿ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅನುಪಸ್ಥಿತಿಯಲ್ಲಿ ಹೊಸತೆನೆಗೆ ಆಶೀರ್ವಚಿಸಿ ಸಂದೇಶ ನೀಡಿದರು.
ನಾವು ಪಡೆಯುವ ಆಹಾರಕ್ಕಾಗಿ ಕೃತಜ್ಞರಾಗಿರಲು, ರೈತರ ಪರಿಶ್ರಮ ಗೌರವಿಸಲು ಹಾಗೂ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಲು ಈ ಹಬ್ಬ ಕರೆ ನೀಡುತ್ತದೆ. ಇದು ಪರಸ್ಪರ ಕಾಳಜಿ, ಕಳಕಳಿ ಮತ್ತು ಕ್ಷಮೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುವ ಸಂದರ್ಭವೂ ಆಗಿದೆ. ಕುಟುಂಬದ ಸದಸ್ಯರು ಪರಿಪೂರ್ಣರಾಗಿದ್ದರೂ ಕುಟುಂಬ ಬಲಿಷ್ಠವಾಗುವುದಿಲ್ಲ. ಹೀಗಾಗಿ ಪರಸ್ಪರ ಅರ್ಥಮಾಡಿಕೊಳ್ಳಲು, ತಪ್ಪುಗಳ ಕ್ಷಮಿಸಲು, ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಲು ಮತ್ತು ಸಂತೋಷದ ಕ್ಷಣ ಪರಸ್ಪರ ಹಂಚಿಕೊಳ್ಳುವುದರಿಂದ ಕುಟುಂಬ ಬಲಿಷ್ಠವಾಗುತ್ತದೆ. ಇದಕ್ಕೆ ಮೊಂತಿ ಹಬ್ಬ ಇನ್ನಷ್ಟು ಬಲ ನೀಡುತ್ತದೆ ಎಂದರು.
ಹೊಸ ತೆನೆಯ ಮೆರವಣಿಗೆ
ಉಡುಪಿ ಶೋಕಮಾತಾ ದೇವಾಲಯದಲ್ಲಿ ಚರ್ಚ್ನ ಗುರು ಡೆನಿಸ್ ಡೆಸಾ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿತು. ಪ್ರವೀಣ್ ಲಿಯೋ ಹಾಗೂ ವಿಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚಿನ ರೆಕ್ಟರ್ ಮೊನ್ಞಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಹೊಸ ತೆನೆಗೆ ಆಶೀರ್ವಚಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು. ಮುಂಜಾನೆಯೇ ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್ಗೆ ಮೆರವಣಿಗೆಯಲ್ಲಿ ಕೊಂಡೊಯ್ದರು. ತೆನೆ ಪೂಜೆಯ ಬಳಿಕ ಅದನ್ನು ಭಕ್ತರಿಗೆ ಹಂಚಲಾಯಿತು.
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚ್ನಲ್ಲಿ ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಚಾರ್ಲ್ಸ್ ಮಿನೇಜಸ್ ಸೇರಿದಂತೆ ಇನ್ನಿತರ ಚರ್ಚ್ಗಳಲ್ಲಿ ತೆನೆಹಬ್ಬ ಆಚರಿಸಲಾಯಿತು.
ಹೊಸ ಅಕ್ಕಿಯ ಹಾಲುಪಾಯಸ ಊಟದ ಸವಿ
ಉಡುಪಿ ಜಿಲ್ಲಾದ್ಯಂತ ಕ್ರೈಸ್ತರು ಮಾತೆ ಮೇರಿ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಎಲ್ಲ ಚರ್ಚ್ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ನಡೆಯಿತು. ಧರ್ಮಗುರುಗಳು ತೆನೆ ಪೂಜೆ, ಬಲಿ ಪೂಜೆ ನೆರವೇರಿಸಿದರು. ಗ್ರೊಟ್ಟೋದ ಮುಂಭಾಗದಲ್ಲಿಟ್ಟಿದ್ದ ಮಾತೆ ಮೇರಿಯಮ್ಮಳ ಬಾಲರೂಪ ಪ್ರತಿಮೆಗೆ ನೂರಾರು ಮಕ್ಕಳು, ಹಿರಿಯರು ಭಕ್ತಿಯಿಂದ ಬಣ್ಣ ಬಣ್ಣದ ಪುಷ್ಪ ಅರ್ಪಿಸಿದರು. ಮಾತೆಯ ಮೇಲಿನ ಗೌರವ, ಭಕ್ತಿ, ಹೆಣ್ಣುಮಕ್ಕಳ ರಕ್ಷಣೆಯ ಕಾಳಜಿ ತೆರೆದುಕೊಂಡವು. ಚರ್ಚ್ನಿಂದ ತಂದ ಹೊಸ ತೆನೆಯನ್ನು ಮನೆಯಲ್ಲಿ ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭತ್ತವನ್ನು ಕುಟ್ಟಿ ಆ ಅಕ್ಕಿಗೆ ಹಾಲು, ತೆಂಗಿನಹಾಲು ಬೆರೆಸಿ ಪಾಯಸ ತಯಾರಿಸಿ, ಸಸ್ಯಾಹಾರಿ ಊಟ ಸವಿದು ಸಂಭ್ರಮಿಸಿದರು.