ಉಡುಪಿಯ ಪ್ರಗತಿ ನಗರದ ರಸ್ತೆಯ ಪಕ್ಕದಲ್ಲಿ ರಾಶಿ ಬಿದ್ದಿದ್ದ ಕಸ-ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛ ಮಾಡಿರುವುದು.
* ಅಲೆವೂರು ಗ್ರಾಪಂನಿಂದ ಕಸ ವಿಲೇವಾರಿ
* ರಸ್ತೆಗೆ ಎಸೆಯದಿರಿ ಮನೆಯ ತ್ಯಾಜ್ಯ
ತಾಲೂಕಿನ ಪ್ರಗತಿ ನಗರದ ಪ್ರಮುಖ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಮನೆಗಳ ತ್ಯಾಜ್ಯ ಹಾಗೂ ಕಸದ ರಾಶಿಯನ್ನು ಅಲೆವೂರು ಗ್ರಾಮ ಪಂಚಾಯಿತಿ ತೆರವುಗೊಳಿಸಿ ಸ್ವಚ್ಛ ಮಾಡಿಸಿದೆ.
ಸುಂದರ ಪರಿಸರದ ಅಂದವನ್ನೇ ಕೆಡಿಸಿರುವ ಕಸಗಳ ರಾಶಿ ಹಾಗೂ ಅವ್ಯವಸ್ಥೆಯ ಕುರಿತು ಫೆ.22ರಂದು ವಿಜಯವಾಣಿಯು 'ಅಂದ ಕಳೆದುಕೊಂಡ ಪ್ರಗತಿ ನಗರ' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಗ್ರಾಪಂನ ಪಿಡಿಒ ಪ್ರವೀಣ್ ಡಿಸೋಜಾ, ಕಸಗಳನ್ನು ತೆರವು ಮಾಡಿಸುವ ಮೂಲಕ ಪರಿಸರದ ಅಂದ ಸರಿಪಡಿಸಿದ್ದಾರೆ.
ಗಮನಿಸಲಿ ನಗರಸಭೆ
ಉಡುಪಿ ನಗರದಿಂದ ಕಸಗಳನ್ನು ತರುವ ಹಲವು ವಾಹನಗಳು ಪ್ರಗತಿ ನಗರ ರಸ್ತೆ ಮಾರ್ಗವಾಗಿಯೇ ಅಲೆವೂರು ಡಂಪಿಂಗ್ ಯಾರ್ಡ್ಗೆ ಸಂಚರಿಸುತ್ತವೆ. ಅವುಗಳಿಂದ ಕಸ ಬೀಳುತ್ತದೆ ಎಂಬ ಆರೋಪವಿದೆ. ಕಸ ಸಾಗಿಸುವ ವಾಹನಗಳು ರಸ್ತೆಯ ಮೇಲೆ ತ್ಯಾಜ್ಯ ಬೀಳದಂತೆ ಸರಿಯಾದ ಕ್ರಮ ಅನುಸರಿಸಿ ಸಾಗುವಂತೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಸಂಗ್ರಹಗೊಳ್ಳಲಿದೆ.
ಹೊಂಡಮಯ ರಸ್ತೆ ಸರಿಪಡಿಸುವವರು ಯಾರು?
ಪ್ರಗತಿ ನಗರವು ಕೇವಲ ಜನವಸತಿಯಷ್ಟೇ ಇರುವ ಸಾಮಾನ್ಯ ಊರಲ್ಲ. ಇದು ಪ್ರತಿಷ್ಠಿತ ಗ್ರಾಮವಾಗಿದ್ದು, ಇಲ್ಲಿ ಕೇಂದ್ರೀಯ ವಿದ್ಯಾಲಯ, ಡಾ. ವಿ.ಎಸ್. ಆಚಾರ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತರಬೇತಿ ಮತ್ತು ಶಿಬಿರ ಕೇಂದ್ರ, ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಮುಖ್ಯ ಕಚೇರಿ, ಸರ್ಕಾರಿ ಐಟಿಐ ಕಾಲೇಜು ಇದೆ. ಹೀಗಾಗಿ ನಿತ್ಯ ಈ ಮಾರ್ಗದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಕೆಲಸದ ನಿಮಿತ್ತ ಹಲವು ಜನರು ಸಂಚರಿಸುವ ಪ್ರಮುಖ ಮಾರ್ಗವಾಗಿದೆ. ಆದರೆ, ಇಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿದ್ದ ಕಸ ತೆರವು ಮಾಡಿರುವುದು ಸಂತಸ ತಂದಿದೆ. ಆದರೆ, ಹೊಂಡಮಯವಾಗಿರುವ ರಸ್ತೆ ದುರಸ್ತಿ ಮಾಡುವವರು ಯಾರು ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.
ಪ್ರಗತಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ ಇರುವ ಕುರಿತು 'ವಿಜಯವಾಣಿ' ವರದಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿದ್ದ ಎಲ್ಲ ತ್ಯಾಜ್ಯಗಳನ್ನೂ ತೆರವು ಮಾಡಿಸಲಾಗಿದೆ. ಉಡುಪಿ ನಗರದ ಕಸ ಸಾಗಿಸುವ ವಾಹನಗಳ ಚಾಲಕರು ರಸ್ತೆಯ ಮೇಲೆ ಕಸ ಬೀಳದ ರೀತಿಯಲ್ಲಿ ಸರಿಯಾಗಿ ಮುಚ್ಚಿಕೊಂಡು ಹೋಗಬೇಕು. ಸ್ಥಳೀಯ ಜನರೂ ಸಹ ರಸ್ತೆಗೆ ತಮ್ಮ ಮನೆಗಳ ಕಸ ತಂದು ಎಸೆಯದೆ ಪರಿಸರದ ಸ್ವಚ್ಛತೆ ಕಾಪಾಡಬೇಕು.