ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪದಾಧಿಕಾರಿಗಳು ಪ್ರಭಾರ ಡಿಡಿಪಿಐ ಡಾ. ಅಶೋಕ್ ಕಾಮತ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸುನಂದಾ, ರತ್ನಾ, ಮಂಜುಳಾ, ಕವಿರಾಜ್ ಎಸ್. ಕಾಂಚನ್ ಇದ್ದರು.
* ವಿವಿಧ ಬೇಡಿಕೆ ಈಡೇರಿಸಲು ಅಕ್ಷರ ದಾಸೋಹ ನೌಕರರ ಆಗ್ರಹ
ಉಡುಪಿ: ಬೆಲೆ ಏರಿಕೆಗೆ ಅನುಗುಣವಾಗಿ ಅಕ್ಷರ ದಾಸೋಹ ಯೋಜನೆಗೆ ಅನುದಾನ ಹೆಚ್ಚಿಸದೆ ಖಾಸಗಿ ಸಂಸ್ಥೆಗಳಿಗೆ ಯೋಜನೆ ವಹಿಸುವ ಸರ್ಕಾರದ ಧೋರಣೆ ವಿರೋಧಿಸಿ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು)ವು ಜು.13ರಂದು ಬಿಸಿಯೂಟ ಬಂದ್ ಮಾಡಿ, ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ ತಿಳಿಸಿದರು.
ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿ, ಈ ಹೋರಾಟದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮೀ ಪಾಲ್ಗೊಳ್ಳಲಿದ್ದಾರೆ. ನಮ್ಮ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖ ಬೇಡಿಕೆ ಏನು?
ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ 7 ಸಾವಿರ ರೂ.ಗೆ ವೇತನ ಹೆಚ್ಚಳ, ದಿನದಲ್ಲಿ 6 ಗಂಟೆಯ ಕೆಲಸಕ್ಕೆ ನಿಗದಿಸಿ ಸುತ್ತೋಲೆ, ಸೂಕ್ತ ಆರೋಗ್ಯ ವಿಮೆ, ಮುಖ್ಯ ಅಡುಗೆಯವರಿಗೇ ಸಾಧಿಲ್ವಾರು ಜಂಟಿ ಖಾತೆ ನೀಡುವುದು, ಕೆಪಿಎಸ್ ಶಾಲೆಗಳು, ಇಸ್ಕಾನ್, ಮಠ ಹಾಗೂ ಇತರ ಖಾಸಗಿ ಸಂಸ್ಥೆಗಳಿಗೆ ಯೋಜನೆ ನೀಡದಿರುವುದು, ನೌಕರರನ್ನು ಕೆಲಸದಿಂದ ತೆಗೆಯುವ ನೀತಿ ಕೈಬಿಡುವುದು, ಎಂಡಿಎಂ ಯೋಜನೆಗೆ ಸಮರ್ಪಕ ಅನುದಾನ ನಿಗದಿ, ನಿವೃತ್ತರಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ನೀಡುವುದು, ನಿವೃತ್ತರಾದ ಎಲ್ಲ ನೌಕರರಿಗೆ ಬಾಕಿ ಇರುವ ಇಡುಗಂಟು ಸೌಲಭ್ಯ ತಕ್ಷಣ ಜಾರಿ, ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್ ತೀರ್ಪಿನಂತೆ ವರ್ಷಪೂರ್ತಿ 12 ತಿಂಗಳ ಕೆಲಸ ಹಾಗೂ ಕನಿಷ್ಠ ಕೂಲಿ ಜಾರಿ ಸೇರಿದಂತೆ ವಿವಿಧ ಇನ್ನಿತರ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ರತ್ನಾ, ಮಂಜುಳಾ, ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಇದ್ದರು.