ಫಿಶ್​ ಫ್ಯಾಕ್ಟರಿ ಸುತ್ತಮುತ್ತ ಕಾಲ ಕಳೆಯುತ್ತಿದ್ದ ಉದ್ಯೋಗಿಗಳ 30 ಮಕ್ಕಳನ್ನು ಅಕ್ಕ ಪಡೆ ತಂಡವು ರಕ್ಷಿಸಿದೆ.  
ಉಡುಪಿ

ಫಿಶ್​ ಫ್ಯಾಕ್ಟರಿ ಉದ್ಯೋಗಿಗಳ ಶಿಕ್ಷಣ ವಂಚಿತ 30 ಮಕ್ಕಳನ್ನು ರಕ್ಷಿಸಿದ ಅಕ್ಕಪಡೆ

ಉಡುಪಿ: ಬ್ರಹ್ಮಾವರಲ್ಲಿ ಮೀನು ಸಂಸ್ಕರಣಾ ಘಟಕದ (ಫಿಶ್​ ಫ್ಯಾಕ್ಟರಿ) ಸುತ್ತಮುತ್ತ ಕಾಲ ಕಳೆಯುತ್ತಿದ್ದ ಉದ್ಯೋಗಿಗಳ 30 ಮಕ್ಕಳನ್ನು ಅಕ್ಕ ಪಡೆ ತಂಡವು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ರಕ್ಷಿಸಿದೆ.

ನವೆಂಬರ್​ 3ರಂದು ಬ್ರಹ್ಮಾವರ ತಾಲೂಕಿನ ಫಿಶ್​ ಫ್ಯಾಕ್ಟರಿಯೊಂದರ ಮೇಲೆ 'ಅಕ್ಕ ಪಡೆ', ಸಿಆರ್​ಪಿ ಹಾಗೂ ಸಿಎಸ್​ಒ ಇಲಾಖೆಗಳ ಅಧಿಕಾರಿಗಳ ತಂಡ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ. ಉದ್ಯೋಗಕ್ಕಾಗಿ ಬಂದಿದ್ದ ಕಾರ್ಮಿಕರ ಸುಮಾರು 30 ಮಕ್ಕಳು ಯಾವುದೇ ರೀತಿಯ ಶಿಕ್ಷಣವನ್ನು ಪಡೆಯದೆ, ಶಾಲೆಗೆ ತೆರಳದೆ ಫ್ಯಾಕ್ಟರಿಯ ಆವರಣದಲ್ಲಿಯೇ ಕಾಲ ಕಳೆಯುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ. ರಕ್ಷಿಸಲ್ಪಟ್ಟ ಉದ್ಯೋಗಿಗಳ ಮಕ್ಕಳು 6 ವರ್ಷದಿಂದ 14 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ. ಸಮಿತಿಯ ನಿರ್ದೇಶನದಂತೆ ರಕ್ಷಿಸಲ್ಪಟ್ಟ 7 ಬಾಲಕಿಯರನ್ನು ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ಪುನರ್ವಸತಿ ಮತ್ತು ಮುಂದಿನ ಶಿಕ್ಷಣದ ವ್ಯವಸ್ಥೆಗಾಗಿ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.