ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಹೊರಾಂಗಣದಲ್ಲಿ 'ಅಕ್ಕ ಪಡೆ'ಯ ಕಾರ್ಯಾಚರಣಾ ವಾಹನಕ್ಕೆ ಸ್ವರೂಪಾ ಟಿ.ಕೆ. ಚಾಲನೆ ನೀಡಿದರು. ಹರಿರಾಂ ಶಂಕರ್, ಪ್ರತೀಕ್ ಬಾಯಲ್, ಅನುರಾಧಾ ಹಾದಿಮನಿ, ನಾಗರತ್ನಾ ನಾಯಕ್ ಹಾಗೂ ಇಲಾಖಾ ಸಿಬ್ಬಂದಿ ಇದ್ದರು.
* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿಕೆ
* ಕಾರ್ಯಾಚರಣೆಯ ವಾಹನಕ್ಕೆ ಚಾಲನೆ
ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಅಕ್ಕ ಪಡೆ'ಯನ್ನು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದ್ದು ಇದು ಸಂಕಷ್ಟಕ್ಕೆ ಸಿಲುಕಿದ ಮಕ್ಕಳು ಮತ್ತು ಮಹಿಳೆಯರಿಗೆ ನೆರವು ನೀಡಲಿದೆ. ಅವರಿಗೆ ರಕ್ಷಣೆ ನೀಡಿ ಭಯಮುಕ್ತ ವಾತಾವರಣ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ (ಜ.3) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಅಕ್ಕ ಪಡೆ' ಸಿಬ್ಬಂದಿಯ ಕಾರ್ಯಾಚರಣೆಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಎರಡು ಪಾಳಿಯಲ್ಲಿ ಕರ್ತವ್ಯ
ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ಅಕ್ಕ ಪಡೆ ಕಾರ್ಯನಿರ್ವಹಿಸಲಿದೆ. ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗದಂತೆ ತಡೆದು ಸುರಕ್ಷತಾ ಭಾವನೆ ಮೂಡಿಸಿ, ಧೈರ್ಯ ತುಂಬುವ ಕೆಲಸ ಮಾಡಲಿದೆ. ವಾಹನದಲ್ಲಿ ನಾಲ್ವರು ಗೃಹರಕ್ಷಕಿಯರು ಮತ್ತು ಪೊಲೀಸ್ ಇಲಾಖೆಯ ಓರ್ವ ಚಾಲಕನನ್ನು ನಿಯೋಜಿಸಲಾಗಿದೆ. ಎರಡು ಪಾಳಿಯಲ್ಲಿ ಈ ವಾಹನ ಕರ್ತವ್ಯ ನಿರ್ವಹಿಸಲಿದೆ. ತರಬೇತಿ ಪಡೆದ ಅಕ್ಕ ಪಡೆಯ ಸಿಬ್ಬಂದಿ ಶಾಲಾ-ಕಾಲೇಜು, ಬಸ್ ನಿಲ್ದಾಣ, ದೇವಸ್ಥಾನ, ಹಾಸ್ಟೆಲ್ಗಳು, ಜನದಟ್ಟಣೆ ಪ್ರದೇಶ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಗಸ್ತು ನಡೆಸಲಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಅನುರಾಧಾ ಹಾದಿಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ನಾಯಕ್, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.
ಶೋಷಣೆ ಎದುರಿಸುತ್ತಿರುವ ಮಹಿಳೆ-ಮಕ್ಕಳಿಗೆ ಸಹಾಯಹಸ್ತ
ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ 'ಅಕ್ಕ ಪಡೆ' ಕಾರ್ಯಾಚರಣೆ ಆರಂಭಗೊಂಡಿದೆ. ಮಹಿಳಾ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಹಾಗೂ ಶೋಷಣೆ ಎದುರಿಸುತ್ತಿರುವವರಿಗೆ ಸಹಾಯಹಸ್ತ ಒದಗಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡಲಿದ್ದಾರೆ. ಅವರಿಗೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವ, ಸ್ವರಕ್ಷಣೆಯ ಕಾರ್ಯವಿಧಾನ, ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸುವ ಬಗ್ಗೆ, ಪೋಕ್ಸೋ ಪ್ರಕರಣ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಯಂತ್ರಣ ಸೇರಿ ಅಗತ್ಯ ತರಬೇತಿ ನೀಡಲಾಗಿದೆ. ಪೊಲೀಸ್ ವಾಹನಗಳಂತೆ ಅಕ್ಕ ಪಡೆ ವಾಹನದಲ್ಲಿಯೂ ಸಹ ವೈರ್ಲೆಸ್ ಸೆಟ್ ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಮಲ್ಪೆ ಮತ್ತು ಮಣಿಪಾಲದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 8ರ ವರೆಗೆ ಅಕ್ಕ ಪಡೆ ಕಾರ್ಯ ನಿರ್ವಹಿಸಲಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ 181 ಹಾಗೂ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಬಹುದು ಎಂದರು.