ರಥಬೀದಿ ಪಲಿಮಾರು ಮಠದಲ್ಲಿ ಸಿದ್ಧಗೊಂಡಿರುವ ವೇದಿಕೆ.
ಉಡುಪಿ: ರಥಬೀದಿ ಪಲಿಮಾರು ಮಠದಲ್ಲಿ 12 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮೇ 20ರಿಂದ ಪ್ರತಿ ದಿನ 6 ಭಜನಾ ತಂಡಗಳಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ.
ಪಲಿಮಾರು ಶ್ರೀ ವಿದ್ಯಾಧಿಶ ತೀರ್ಥ ಸ್ವಾಮೀಜಿ 2018ರಲ್ಲಿ ಕೃಷ್ಣ ಮಠದಲ್ಲಿ ಪರ್ಯಾಯ ಪೀಠವೇರುವ ಮುನ್ನ ಕನಕ ಗೋಪುರ ಸಮೀಪ 24 ಗಂಟೆಗಳ ನಿರಂತರ ಭಜನಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಇದಕ್ಕಾಗಿ 12 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕೊಠಡಿಯನ್ನೂ ನಿರ್ಮಿಸಲಾಗಿತ್ತು. 2 ವರ್ಷ ಪರ್ಯಾಯದಲ್ಲಿ ಸುಮಾರು 162 ಭಜನಾ ಮಂಡಳಿಗಳು ಸರತಿ ಪ್ರಕಾರ ಗಾಳಿ, ಮಳೆ, ಬಿರು ಬೇಸಗೆಯಲ್ಲೂ ಹಗಲೂ ರಾತ್ರಿ ಭಜನೆಗೆ ಸಾಥ್ ನೀಡಿದ್ದರು. ಉಡುಪಿಯಲ್ಲಿ ಇದೊಂದು ದಾಖಲೆಯಾಗಿದ್ದು, ನಂತರ ಅದಮಾರು ಪರ್ಯಾಯದಲ್ಲಿ ಕೋವಿಡ್ ಲಾಕ್ಡೌನ್ ಹೊರತು ಪಡಿಸಿ ಉಳಿದ ದಿನ ಹಗಲಿನಲ್ಲಿ ಭಜನೆ ನಡೆಯುತ್ತಿತ್ತು. ಕೃಷ್ಣಾಪುರ ಮತ್ತು ಪುತ್ತಿಗೆ ಪರ್ಯಾಯದಲ್ಲೂ ಇದೇ ಜಾಗದಲ್ಲಿ ಭಜನೆ ನಡೆದಿದೆ. ಪ್ರಸ್ತುತ ಶೀರೂರು ಪರ್ಯಾಯದಲ್ಲಿ ಈ ಜಾಗದಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಪ್ರಾರಂಭಿಸಲಾಗಿದ್ದು, ಮಧ್ವ ಮಂಟಪದಲ್ಲಿ ಭಜನೆಗೆ ಅವಕಾಶ ಕಲ್ಪಿಸಲಾಗಿದೆ. ಇದೀಗ ಭಕ್ತರ ಕೋರಿಕೆಯಂತೆ ಪಲಿಮಾರು ಮಠದಲ್ಲಿ ಪೂರ್ಣಪ್ರಮಾಣದಲ್ಲಿ ಹರಿನಾಮ ಸಂಕೀರ್ತನಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸಿದ್ಧಗೊಂಡ ವೇದಿಕೆ
ಪಲಿಮಾರು ಮಠದ ಮುಂಭಾಗ 10 ರಿಂದ 12 ಮಂದಿ ಭಜನೆಗೆ ಕುಳಿತುಕೊಳ್ಳಬಹುದಾದ ವೇದಿಕೆ ಸಿದ್ಧಗೊಂಡಿದ್ದು, ಪ್ರತಿ ದಿನ 6 ಭಜನಾ ತಂಡಗಳು ತಲಾ 2 ಗಂಟೆ ದಾಸರ ಪದಗಳನ್ನು ಹಾಡಲಿದ್ದಾರೆ. ಈಗಾಗಲೇ 150ಕ್ಕೂ ಅಧಿಕ ಭಜನಾ ತಂಡಗಳು ನೋಂದಣಿ ಮಾಡಿಕೊಂಡಿವೆ.
"
ಭಜನಾಮಂಡಳಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಲಿಮಾರು ಶ್ರೀಗಳು ಮಠದ ಆವರಣದಲ್ಲಿ ಅಖಂಡ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಥಬೀದಿಯಲ್ಲಿ ನಿರಂತರ ದೇವರ ಸ್ಮರಣೆ ನಡೆಯಬೇಕು ಎಂಬುದು ಯೋಜನೆ ಉದ್ದೇಶ. ಅನೇಕ ಮಂದಿ ಭಜಕರಿಗೆ ದೇವರ ಸನ್ನಿಧಿಯಲ್ಲಿ ನಾಮಸಂಕೀರ್ತನೆಯಿಂದ ಇಷ್ಟಾರ್ಥಗಳು ಸಿದ್ಧಿಯಾಗಿವೆ.
— ವಾಸುದೇವ ಉಪಾಧ್ಯಾಯ, ಭಜನಾ ಸಂಘಟಕರು.