ಉಡುಪಿಯ ಜಿಲ್ಲಾ ಕಾಂಗ್ರೆಸ್ ಭನವನದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್ ಪಟೇಲ್ ಸಭೆ ನಡೆಸಿ ಮಾತನಾಡಿದರು. ಐವಾನ್ ಡಿಸೋಜ, ಅಶೋಕ್ ಕೊಡವೂರು, ಶಾಲೆಟ್ ಪಿಂಟೋ, ಕೆ. ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ ಅಲೆವೂರು ಇತರರಿದ್ದರು.
* ಎಐಸಿಸಿ ವೀಕ್ಷಕ ಹಿಮ್ಮಂತ್ ಸಿಂಗ್ ಪಟೇಲ್ ಮಾಹಿತಿ
* ದೇಶಾದ್ಯಂತ ನೂತನ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸರ್ವೇ
ಉಡುಪಿ: ಗುಜರಾತ್ನಲ್ಲಿ ಇತ್ತೀಚೆಗೆ ನಡೆದ ಎಐಸಿಸಿ ಸಭೆಯಲ್ಲಿ ಹೈಕಮಾಂಡ್ ನಿರ್ಧಾರದಂತೆ ದೇಶವ್ಯಾಪಿ ಕಾಂಗ್ರೆಸ್ಅನ್ನು ಇನ್ನಷ್ಟು ಬಲಪಡಿಸಲು 'ಸಂಘಟನಾ ಸೃಜನ್ ಅಭಿಯಾನ (ಎಸ್ಎಸ್ಎ)' ಆರಂಭಗೊಂಡಿದೆ. ಈ ಅಭಿಯಾನದ ಮೂಲಕ ದೇಶದ ಎಲ್ಲ ಜಿಲ್ಲೆಗಳಲ್ಲಿ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ಚುಕ್ಕಾಣಿ ಯಾರಿಗೆ ನೀಡಬೇಕೆನ್ನುವ ಬಗ್ಗೆ ಸರ್ವೇ ನಡೆಸಿ ಅರ್ಹ ಆರು ಮಂದಿಯ ಹೆಸರನ್ನು ಪಕ್ಷದ ವರಿಷ್ಠರಿಗೆ ರವಾನಿಸಲಾಗುವುದು. ಅಂತಿಮವಾಗಿ ಸಮರ್ಥರಾದ ಒಬ್ಬರನ್ನು ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ನೇಮಿಸಲಿದ್ದೇವೆ ಎಂದು ಎಐಸಿಸಿ ವೀಕ್ಷಕ ಹಿಮ್ಮಂತ್ ಸಿಂಗ್ ಪಟೇಲ್ ತಿಳಿಸಿದರು.
ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ (ಜು.25) ಆಯೋಜಿಸಿದ್ದ ಜಿಲ್ಲಾ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ತಳಮಟ್ಟದಿಂದ ಮತ್ತೆ ಕಾಂಗ್ರೆಸ್ ಸಂಘಟಿಸುವ ಕೆಲಸವಾಗುತ್ತಿದೆ. ಯುವ ನಾಯಕತ್ವದ ಮೂಲಕ ಪಕ್ಷಕ್ಕೆ ಹೊಸ ರೂಪ ನೀಡಲಾಗುತ್ತಿದೆ ಎಂದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ 'ಭಾರತ್ ಜೋಡು ಯಾತ್ರಾ'ಕ್ಕೆ ಅಭೂತಪೂರ್ವ ಯಶಸ್ಸು ಲಭಿಸಿತ್ತು. ಹೀಗಾಗಿ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು 'ಎಸ್ಎಸ್ಎ' ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೊಸ ಚೈತನ್ಯ ನೀಡಿ ಪಕ್ಷವನ್ನು ಕಟ್ಟುವ ಉದ್ದೇಶದಿಂದ ಹೊಸ ನಾಯಕರ ಆಯ್ಕೆ ಮಾಡಲಾಗುವುದು. ಈ ಬಗ್ಗೆ ಜಿಲ್ಲೆಯ ಮಾಜಿ ಶಾಸಕರು, ಸಚಿವರು, ಸಂಸದರು, ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ಪ್ರಮುಖ ಮುಖಂಡರ ಅಭಿಪ್ರಾಯ ಕ್ರೋಡಿಕರಿಸಲಾಗುತ್ತದೆ. ಉಡುಪಿ ಜಿಲ್ಲೆಗೆ ಬೇಕಾದ ಸಮರ್ಥ ನಾಯಕನನ್ನು ಜನರೇ ಆಯ್ಕೆ ಮಾಡುವ ಉದ್ದೇಶ ಇದಾಗಿದೆ. ಇದು ಚುನಾವಣೆಗೆ ಸಂಬಂಧಿತ ವಿಚಾರವಲ್ಲ. ಯುವ ನಾಯಕತ್ವಕ್ಕೆ ಆದ್ಯತೆ ನೀಡುವುದೇ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಅಭಿಯಾನದ ಉಸ್ತುವಾರಿ ಶಾಲೆಟ್ ಪಿಂಟೋ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ್ ಪೂಜಾರಿ, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ ಅಲೆವೂರು, ಜ್ಯೋತಿ ಹೆಬ್ಬಾರ್, ಕೃಷ್ಣ ಶೆಟ್ಟಿ ಬಜಗೋಳಿ, ವಿಶ್ವಾಸ್ ಅಮೀನ್, ಅಬ್ದುಲ್ ಅಜೀಜ್, ನವೀನ್ಚಂದ್ರ ಶೆಟ್ಟಿ, ರೋಶನ್ ಶೆಟ್ಟಿ ಇದ್ದರು.
ತಿಂಗಳೊಳಗೆ ಹೊಸ ನಾಯಕರ ನೇಮಕ
ವಿಪ ಸದಸ್ಯ ಐವಾನ್ ಡಿಸೋಜ ಮಾತನಾಡಿ, ಎಐಸಿಸಿ ವೀಕ್ಷಕರು ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ, 10 ಬ್ಲಾಕ್, ಎಲ್ಲ ಜನಪ್ರತಿನಿಧಿಗಳನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಜು.30ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ಎಲ್ಲವನ್ನೂ ಗಮನಿಸಿ, ಅರ್ಜಿ ಸಲ್ಲಿಸಿದ ಎಲ್ಲ ಆಸಕ್ತ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಮಾತನಾಡಿಸಿ, ಪಕ್ಷ ಸಂಘಟನೆ ಯಾವ ರೀತಿ ಮಾಡುತ್ತಾರೆ ಎಂದು ತಿಳಿದು ಅಂತಿಮ ಪಟ್ಟಿ ಮಾಡಲಿದ್ದಾರೆ. ಆ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮಹಿಳೆ ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ಕೊಡಲಾಗುತ್ತಿದೆ. ಹೈಕಮಾಂಡ್ ಈ ಪಟ್ಟಿಯನ್ನು ಪರಿಶೀಲಿಸಿ ಅಭ್ಯರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಆಗಸ್ಟ್ ಅಂತ್ಯದೊಳಗೆ ಜಿಲ್ಲಾಧ್ಯಕ್ಷರ ಆಯ್ಕೆಯ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.