ಕೃಷಿ ಖುಷಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ಎಂ.ಬಾಹುಬಲಿ ಪ್ರಸಾದ್, ಕೆ.ಅಭಯಚಂದ್ರ ಮತ್ತಿತರು ಉಪಸ್ಥಿತರಿದ್ದರು.
ಮೂಡುಬಿದಿರೆ: ಕೃಷಿ ನಮ್ಮ ಬದುಕು, ದೇಶದ ಜೀವಾಳ. ಕೃಷಿಯಲ್ಲಿರುವ ಅಪಾರ ಅವಕಾಶಗಳನ್ನು ಯುವಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ, ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ವಲಯ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಎಂಸಿಎಸ್ ಸೊಸೈಟಿ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ಕೃಷಿ ಖುಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಸೊಸೈಟಿ ನಿರ್ದೇಶಕ, ಮಾಜಿ ಸಚಿವ ಕೆ.ಅಭಯಚಂದ್ರ, ಅನಿತಾ ಪಿ.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಆಳ್ವಾಸ್ ಕೃಷಿ ವಿಜ್ಞಾನ ಕಾಲೇಜಿನ ಡೀನ್ ವಾಸುದೇವ ಎನ್.ಎಸ್. ಕೃಷಿ-ಖುಷಿ: ಪ್ರಕೃತಿ ಕೃಷಿ ವಿಸ್ಮಯ ಹಾಗೂ ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಸುರತ್ಕಲ್ ಕೃಷಿ-ಯುವ ಜನತೆ-ಆಧುನಿಕತೆ ಕುರಿತು ಉಪನ್ಯಾಸ ನೀಡಿದರು.
ಪಾಸ್ಕಲ್ ಪಿಂಟೋ ತಾಕೊಡೆ, ನವೀನ್‌ಚಂದ್ರ ಅಂಬೂರಿ, ಮುಳಿಬೆಟ್ಟು ತೇಜಸ್ ಶೆಟ್ಟಿ, 32 ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಮಾಲಿಯಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ ಅವರನ್ನು ವಿವಿಧ ಕ್ಷೇತ್ರಗಳ ಸಾಧನೆಗಾಗಿ ಸನ್ಮಾನಿಸಲಾಯಿತು. ಮಾರ್ಪಾಡಿ ರೈತ ಸಂಘ, ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರವನ್ನು ಸನ್ಮಾನಿಸಲಾಯಿತು. ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನವೀನ್‌ಚಂದ್ರ ಅಂಬೂರಿ, ಚೇತನಾ ಆರ್.ಹೆಗ್ಡೆ ಕೃಷಿ ವಿಚಾರ ಕುರಿತು ರಸಪ್ರಶ್ನೆ ನಡೆಸಿಕೊಟ್ಟರು.
ಧನಂಜಯ ಮೂಡುಬಿದಿರೆ ಅವರು ಡಾ.ಅರವಿಂದ ಮಾಲಗತ್ತಿ ಅವರ ಮಳೆ ಬಂದಿತಣ್ಣಾ ಕವನ ಹಾಡಿದರು. ಕೃಷಿ ವಿಚಾರ ವಿನಿಮಯ ಕೇಂದ್ರ ಅಧ್ಯಕ್ಷ ಅಭಯ ಕುಮಾರ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಗುಣಪಾಲ ಮುದ್ಯ ವಂದಿಸಿದರು. ಚೇತನಾ ಆರ್.ಹೆಗ್ಡೆ, ನವೀನ್ ಅಂಬೂರಿ ನಿರೂಪಿಸಿದರು.