ಸೀತಾನದಿ ರಭಸಕ್ಕೆ ಮಣ್ಣು ಸವೆತ
ಬ್ರಹ್ಮಾವರ: ಪಶ್ಚಿಮಟ್ಟದಿಂದ ಹರಿದುಬರುವ ಸೀತಾನದಿಯ ಪ್ರವಾಹದಿಂದ ಭೂಮಿ ಸವೆತಗೊಂಡು ಕೃಷಿ ಭೂಮಿಗಳು ಮತ್ತು ಭೂ ಸವೆತಕ್ಕೆ ನದಿ ತೀರದಲ್ಲಿರುವ ಬೃಹತ್ ಮರಗಳು ನದಿ ಒಡಲು ಸೇರುತ್ತಿವೆ. ಸಣ್ಣ ನೀರಾವರಿ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಸುಳಿಯದ ಕಾರಣ ವರ್ಷದಿಂದ ವರ್ಷಕ್ಕೆ ನೂರಾರು ಎಕರೆ ಕೃಷಿ ಭೂಮಿ ನದಿ ಪಾಲಾಗುತ್ತಿದೆ.
ಬಾರಕೂರು ಬಳಿಯ ಹನೆಹಳ್ಳಿ ಗ್ರಾಮ ವ್ಯಾಪ್ತಿಯ ಬಂಡೀಮಠದಲ್ಲಿ ಕೃಷಿ ಭೂಮಿಗಳು ನದಿ ಪಾಲಾಗುತ್ತಿವೆ. ಸೀತಾನದಿಯು ನೀಲಾವರ ಸೇತುವೆ ಮತ್ತು ಕಿಂಡಿ ಅಣೆಕಟ್ಟು ನಡುವಿನಲ್ಲಿ ತಿರುವು ಪಡೆಯುವ ಭಾಗದಲ್ಲಿ ಕೃಷಿ ಭೂಮಿ ಪ್ರವಾಹಕ್ಕೆ ಸಿಲುಕುತ್ತಿದೆ. ಕೃಷಿಕರು ನೆಟ್ಟಿದ್ದ ಮರಗಳು ಮತ್ತು ಮಣ್ಣು ಕೊಚ್ಚಿ ಹೋಗುತ್ತಿದೆ.
ಹನೆಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಮತ್ತು ಪಂಚಾಯಿತಿ ಸದಸ್ಯರು ನದಿಗೆ ದಂಡೆ ಕಟ್ಟಬೇಕೆಂದು ಆಗ್ರಹಿಸಿ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿ ವರ್ಷವಾದರೂ ಸ್ಪಂದನೆ ಶೂನ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಕೃಷಿ ಭೂಮಿ, ಮರಗಳು, ಮಣ್ಣು ನದಿ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.