ಪುಸ್ತಕ-ಲೇಖನ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ನನ್ಯ ಅಚ್ಯುತ ಮೂಡೆತ್ತಾಯ ಉದ್ಘಾಟಿಸಿದರು. ಕೇಶವ ಮೂರ್ತಿ, ಹರೀಶ್ ಕುಲಾಲ್, ಅಮ್ಮು ಪೂಂಜ, ಗಾಯತ್ರಿ ಇತರರು ಇದ್ದರು.
ಪುತ್ತೂರು ಗ್ರಾಮಾಂತರ: ಒಂದು ನಿಯಮವನ್ನು ಶಿಸ್ತುಬದ್ಧವಾಗಿ ಪಾಲಿಸಿದಾಗ ವ್ಯಕ್ತಿಯಾಗಲೀ ಅಥವಾ ಸಂಘಟನೆಯಾಗಲೀ ಉನ್ನತಿಗೆ ಏರಲು ಸಾಧ್ಯ. ಹತ್ತು ವರ್ಷಗಳಿಂದ ನವೋದಯ ಒಕ್ಕೂಟವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿರುವ ಸೇವಾ ಕಾರ್ಯ ಎಲ್ಲರಿಗೂ ಮಾದರಿ ಎಂದು ಕಾವು ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಹೇಳಿದರು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಭವನದಲ್ಲಿ ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮತ್ತು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗದಲ್ಲಿ ಕಾವು ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ-ಲೇಖನ ಸಾಮಗ್ರಿ ವಿತರಣೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟ ಸದಸ್ಯರ 95 ಮಕ್ಕಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸಲಾಯಿತು. ನಾಲ್ಕು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವ ಮೂರ್ತಿ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಮೇಲ್ವಿಚಾರಕ ಹರೀಶ್ ಕುಲಾಲ್, ಗೌರವಾಧ್ಯಕ್ಷ ಅಮ್ಮು ಪೂಂಜ, ಕಾವು ವಲಯದ ಪ್ರೇರಕಿ ಗಾಯತ್ರಿ, ಒಕ್ಕೂಟದ ನೂತನ ಕಾರ್ಯದರ್ಶಿ ರೇವತಿ ಸಿ.ಎನ್. ಉಪಸ್ಥಿತರಿದ್ದರು.
ಮೀನಾಕ್ಷಿ ಎಂ. ವರದಿ ವಾಚಿಸಿದರು. ಸುಬ್ರಾಯ ಗೌಡ ಸ್ವಾಗತಿಸಿದರು. ಶ್ರೇಯಸ್ ಸಿ.ಎನ್. ವಂದಿಸಿದರು. ಚಿದಾನಂದ ಆಚಾರ್ಯ ನಿರೂಪಿಸಿದರು.