ಶ್ರೀ ಎಡನೀರು ಮಠದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸಿದರು. ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬಲರಾಮ ಆಚಾರ್ಯ ಪುತ್ತೂರು, ಸುರೇಶ್ ನಾಯಕ್, ಕೃಷ್ಣಮೂರ್ತಿ ಮಂಜ ಹೈದರಾಬಾದ್ ಇತರರು ಇದ್ದರು.  
ಉಡುಪಿ

ಆದಿ ಶಂಕರರ ಸಂದೇಶ ಬದುಕಿಗೆ ದಾರಿ

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ವರ್ತಮಾನದ ತಲ್ಲಣಗಳಿಗೆ ಕಾರಣಗಳನ್ನು ಪತ್ತೆ ಹಚ್ಚಿದಾಗ ಪರಿಹಾರಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಆದಿ ಶಂಕರರು ನೀಡಿದ ಸಂದೇಶಗಳು ನಮ್ಮ ಕಣ್ತೆರೆಸಿ ಬದುಕಿನ ಮೂಲ ಲಕ್ಷೃದ ದಾರಿ ತೋರಿಸುತ್ತವೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟರು.
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾತುರ್ವಾಸ್ಯ ವ್ರತಾಚರಣೆ ಪ್ರಯುಕ್ತ ಬುಧವಾರ ಮಠದ ಸಭಾಂಗಣದಲ್ಲಿ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂವಿಧಾನದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಎಡನೀರು ಸ್ವಾಮೀಜೀಸ್ ದಾವೆ’ ಮಠವು ಆಧುನಿಕ ವ್ಯವಸ್ಥೆಗೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಒಂದು. ಕೇವಲ ಧಾರ್ಮಿಕ ಆಚರಣೆಗಷ್ಟೇ ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಶ್ರೀ ಸಚ್ಚಿದಾನಂದ ಭಾರತೀ ತೀರ್ಥರು ಕೈಗೊಳ್ಳುತ್ತಿರುವ ಬೆಂಬಲ, ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾತುರ್ವಾಸ್ಯ ಸಮಿತಿ ಅಧ್ಯಕ್ಷ, ಉದ್ಯಮಿ ಬಲರಾಮ ಆಚಾರ್ಯ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಸುರೇಶ್ ನಾಯಕ್, ಉದ್ಯಮಿ ಕೃಷ್ಣಮೂರ್ತಿ ಮಂಜ ಹೈದರಾಬಾದ್, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಉಪಸ್ಥಿತರಿದ್ದರು.
ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆನೂರು ಅನಂತಕೃಷ್ಣ ಶರ್ಮ ಅವರನ್ನು ಅಭಿನಂದಿಸಲಾಯಿತು. ಚಾತುರ್ವಾಸ್ಯ ಸಮಿತಿ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು.

ಸಂಗೀತ ಜುಗಲ್‌ಬಂದಿ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಶಾಸ್ತ್ರೀಯ, ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತ ವಿಶೇಷ ಜುಗಲ್‌ಬಂದಿ ನಡೆಯಿತು. ಕೊಳಲಿನಲ್ಲಿ ನಾದಜ್ಯೋತಿ ವಿದ್ವಾನ್ ಎಂ.ಕೆ.ಪ್ರಾಣೇಶ್, ಹಾರ್ಮೋನಿಯಂನಲ್ಲಿ ಪಂಡಿತ್ ಡಾ.ರವೀಂದ್ರ ಕಟೋಟಿ ಸಂವಾದಿನಿ, ಮೃದಂಗದಲ್ಲಿ ಅನೂರು ಅನಂತಕೃಷ್ಣ ಶರ್ಮ, ತಬಲಾದಲ್ಲಿ ರೂಪಕ್ ಕಲ್ಲೂರ್ಕರ್ ಸಾಥ್ ನೀಡಿದರು.

ಚಾತುರ್ವಾಸ್ಯದ ಎರಡು ತಿಂಗಳ ಕಾಲ ಸಾಂಸ್ಕೃತಿಕ ಉತ್ಸವಗಳನ್ನು ಆಯೋಜಿಸುತ್ತ ಹಿಂದಿನ ಶ್ರೀಗಳ ಪರಂಪರೆ ಮುಂದುವರಿಸಲಾಗುತ್ತಿದೆ. ಧಾರ್ಮಿಕ ಕೇಂದ್ರಗಳ ಜವಾಬ್ದಾರಿ ಸವಾಜದಲ್ಲಿ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ. ಧಾರ್ಮಿಕ ಅರಿವು ಮೂಡಿಸುವು ನಮ್ಮ ಕರ್ತವ್ಯ.

— ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಎಡನೀರು ಮಠಾಧೀಶ