ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ. (ಸಾಂದರ್ಭಿಕ ಚಿತ್ರ)
* ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭರವಸೆ
* ಅಧಿವೇಶನದಲ್ಲಿ ಕೋಟ ಪೂಜಾರಿ ಪ್ರಶ್ನೆಗೆ ಉತ್ತರ
ಉಡುಪಿ: ಕುಂದಾಪುರದಿಂದ ಹೆಜಮಾಡಿಯವರೆಗೆ ಮತ್ತು ಹೆಜಮಾಡಿಯಿಂದ ಕೇರಳದ ಗಡಿವರೆಗಿನ ಎನ್ಎಚ್-66ರ ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಸಲಹಾ ಸಂಸ್ಥೆ ನೇಮಿಸಿದ್ದು, 2026ರ ಮೇ 14ರಿಂದ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಎನ್ಎಚ್-66ರ ಹೆಚ್ಚುವರಿ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಲಿಖಿತ ಪ್ರಶ್ನೆ 3,176ಕ್ಕೆ ಉತ್ತರಿಸಿದ ಸಚಿವ ಗಡ್ಕರಿ, ಕುಂದಾಪುರದಿಂದ ಪ್ರಾರಂಭಿಸಿ ಹೆಜಮಾಡಿ ವರೆಗಿನ ವಾಹನ ಸಂಚಾರದ ದಟ್ಟಣೆ, ರಸ್ತೆ ಸುರಕ್ಷತೆಯ ಎಲ್ಲ ಅಗತ್ಯತೆ ಪೂರೈಸಲಾಗುವುದು ಎಂದು ತಿಳಿಸಿದರು.
ಸೂಕ್ತ ಕ್ರಮದ ಭರವಸೆ
ಎನ್ಎಚ್-66ರ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ, ಅಗತ್ಯವಿರುವ ಕಡೆಗಳಲ್ಲಿ ಮೇಲ್ಸೇತುವೆ, ಅಗತ್ಯತೆ ಇದ್ದಲ್ಲಿ ಹೆಚ್ಚುವರಿ ಅಂಡರ್ಪಾಸ್ ಸೇರಿದಂತೆ ಹೆದ್ದಾರಿಯಲ್ಲಿ ಅಪಘಾತ ರಹಿತ ವಾಹನ ಸಂಚಾರಕ್ಕೆ ಪ್ರಸ್ತುತ ಯೋಜನಾ ವರದಿ ಸಿದ್ಧವಾಗುತ್ತಿದೆ. ಕುಂದಾಪುರ-ಹೆಜಮಾಡಿಯಿಂದ ಮುಂದುವರಿದು ಕೇರಳದ ಗಡಿಯಲ್ಲೂ ವಾಹನ ದಟ್ಟಣೆ, ಆಗಬಹುದಾದ ಅವಘಡಗಳ ತಡೆಗೆ ಎಲ್ಲ ಕ್ರಮ ಕೈಗೊಳ್ಳಾಗುವುದು. ಉಡುಪಿ ಸಂತೆಕಟ್ಟೆಯ ಮೇಲ್ಸೇತುವೆಯ ಬಳಿ ಹೋಟೆಲ್ ದೋಣಿಮನೆ ಸಹಿತ ಉಳಿದ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಕಲ್ಯಾಣಪುರ- ಸಂತೆಕಟ್ಟೆಯ ಮೇಲ್ಸೇತುವೆ, ಅಂಬಲಪಾಡಿಯಲ್ಲಿ ಸೇತುವೆ ಮತ್ತು ಕಟಪಾಡಿಯ ಅಂಡರ್ಪಾಸ್ ಪ್ರಗತಿಯ ಬಗ್ಗೆ ಸಚಿವ ಗಡ್ಕರಿ ಅವರಿಗೆ ಸಂಸದ ಕೋಟ ಪೂಜಾರಿ ಅಭಿನಂದನೆ ತಿಳಿಸಿದರು.