ಉಡುಪಿ ಕಿದಿಯೂರಿನ ವಿದ್ಯಾಸಮುದ್ರ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಗಳಿಂದಾಗುವ ದುಷ್ಪರಿಣಾಮದ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. 
ಉಡುಪಿ

ದುಶ್ಚಟಗಳಿಂದ ಮಕ್ಕಳ ಉಜ್ವಲ ಭವಿಷ್ಯ ನಾಶ

ಮುಖ್ಯ ಶಿಕ್ಷಕಿ ಶ್ಯಾಮಲಾ ಪ್ರಸಾದ್​ ಅನಿಸಿಕೆ
ವಿದ್ಯಾರ್ಥಿಗಳ ಬೀದಿ ನಾಟಕ ಉದ್ಘಾಟನೆ

ಉಡುಪಿ: ಇಂದಿನ ಯುವಸಮುದಾಯ ಮಾದಕ ದ್ರವ್ಯಗಳಾದಂತಹ ಡ್ರಗ್ಸ್​, ಚರಸ್​, ಗಾಂಜಾ ಹಾಗೂ ಕುಡಿತದ ಚಟಕ್ಕೆ ಬಲಿಯಾಗುವ ಮೂಲಕ ಉಜ್ವಲ ಭವಿಷ್ಯವನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳ ದಾಸರಾಗದೆ ಚೆನ್ನಾಗಿ ಓದಿ ದೇಶದ ಕೀರ್ತಿ ಹೆಚ್ಚಿಸಬೇಕು ಎಂದು ಮುಖ್ಯ ಶಿಕ್ಷಕಿ ಶ್ಯಾಮಲಾ ಪ್ರಸಾದ್​ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಂಬಲಪಾಡಿ ವಿದ್ಯಾಸಮುದ್ರ ಇಂಗ್ಲಿಷ್​ ಮೀಡಿಯಂ ಸ್ಕೂಲ್​ ಕಿದಿಯೂರಿನ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಗಳಿಂದಾಗುವ ದುಷ್ಪರಿಣಾಮದ ಕುರಿತು ಶಾಲೆಯ ಮುಂಭಾಗದ ರಸ್ತೆಯಲ್ಲಿ ಆಯೋಜಿಸಿದ್ದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಧ್ಯಕ್ಷೆ ಮೀರಾ ಭಟ್ಟ ಮಾತನಾಡಿ, ತಾವುಗಳೂ ಸಹ ವ್ಯಸನಗಳಿಗೆ ತುತ್ತಾಗಬಾರದು. ತಮ್ಮೆಲ್ಲರ ಶೈಕ್ಷಣಿಕ ಬದುಕು ಉತ್ಸಾಹದಿಂದ ಕೂಡಿರಲಿ ಎಂದು ಶುಭಹಾರೈಸಿದರು.
ಶಾಲೆಯ ವಿದ್ಯಾರ್ಥಿಗಳು ಯುವಜನರು ಮಾದಕ ವ್ಯಸನಗಳಿಗೆ ತುತ್ತಾಗುವ ರೀತಿ, ಅದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಆಗುವ ದುಷ್ಪರಿಣಾಮದ ಕುರಿತು ನಾಟಕದ ಮೂಲಕ ಜನರ ಗಮನ ಸೆಳೆದರು. ಶಿಕ್ಷಕರಾದ ರೇಷ್ಮಾ, ಲತಾ ಶೆಟ್ಟಿ, ರಘುವೀರ್​ ಹೊಳ್ಳ, ಮತ್ತು ಸಾತ್ವಿಕ್​ ಸಹಕರಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.