ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.
* ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯ
* ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆಗೆ ಪತ್ರ
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಡಿಬೆಂಗ್ರೆ ಭಾಗವನ್ನು ಸ್ಥಳಿಯ ಜನತೆಯ ಬೇಡಿಕೆಯಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಪಡುತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯಿತಿಗೆ ಸೇರಿಸುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಸ್ವರ್ಣ ನದಿ ಮತ್ತು ಸೀತಾನದಿ ಸಂಗಮ ಸ್ಥಳ, ಅಳಿವೆ ಬಾಗಿಲಿನಲ್ಲಿರುವ ಕೋಡಿಬೆಂಗ್ರೆ ಊರು ಕುಂದಾಪುರ ವಿಧಾನಸಭಾ ಕ್ಷೇತ್ರದ ಕೋಡಿ ಗ್ರಾಪಂಗೆ ಸೇರಿದೆ. ಆ ಊರಿಗೆ ಮೂರು ಕಡೆಗಳಿಂದ ಜಲ ಪ್ರದೇಶ ಆವೃತವಾಗಿದ್ದು, ಒಂದು ಕಡೆ ಮಾತ್ರ ರಸ್ತೆ ಸಂಪರ್ಕವಿದೆ. ಹೀಗಾಗಿ ಅಲ್ಲಿನ ನಿವಾಸಿಗಳು ಸರ್ಕಾರಿ ದಾಖಲೆ ಪತ್ರ ಹಾಗೂ ಇನ್ನಿತರ ಕೆಲಸಗಳಿಗಾಗಿ ಸುಮಾರು 30 ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
275ಕ್ಕೂ ಅಧಿಕ ಕುಟುಂಬ
ಕೋಡಿಬೇಂಗ್ರೆಯಲ್ಲಿ 275ಕ್ಕೂ ಅಧಿಕ ಕುಟುಂಬಗಳು ಜೀವನ ನಿರ್ವಹಸುತ್ತಿದ್ದು, ಮೀನುಗಾರಿಕೆಯೇ ಪ್ರಮುಖ ಕಸುಬಾಗಿದೆ. ಅಲ್ಲದೆ, ಎಲ್ಲ ವರ್ಗದ ಮತ್ತು ಸಮುದಾಯದ ಜನರೂ ಇದ್ದು, 1,200ಕ್ಕೂ ಅಧಿಕ ಮತದಾರರಿದ್ದಾರೆ. 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇಲ್ಲಿನ ಜನರಿಗೆ ಕೇವಲ 4 ಕಿ.ಮೀ. ಅಂತರದಲ್ಲಿ ಪಡುತೋನ್ಸೆ ಗ್ರಾಮ ಪಂಚಾಯಿತಿ ಇದೆ. ಜನರಿಗೆ ಪ್ರಾಥಮಿಕ ಹಂತದ ಮೂಲ ಸೌಲಭ್ಯ ಒದಗಿಸಬೇಕಾದ ಕೋಡಿ ಗ್ರಾಪಂ ಕಚೇರಿ ಗ್ರಾಮದಿಂದ ಬಹುದೂರದಲ್ಲಿದೆ. ಹೀಗಾಗಿ ಅಲ್ಲಿನ ಕುಟುಂಬ ತೊಂದರೆ ಅನುಭವಿಸುತ್ತಿವೆ. ಹೀಗಾಗಿ ಕೋಡಿಬೇಂಗ್ರೆ ವಾರ್ಡ್ಅನ್ನು ಕುಂದಾಪುರ ವಿಧಾನಸಭಾ ಕ್ಷೇತ್ರ ಕೋಡಿ ಗ್ರಾಪಂನಿಂದ ಬೇರ್ಪಡಿಸಿ ಉಡುಪಿ ವಿಧಾನಸಭಾ ಕ್ಷೇತ್ರದ 31ನೇ ಪಡುತೋನ್ಸೆ- ಕೆಮ್ಮಣ್ಣು ಗ್ರಾಪಂಗೆ ಸೇರಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸಚಿವ ಖರ್ಗೆಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.