ಉಡುಪಿಯ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಅಬೀದ್ ಗದ್ಯಾಳ್ ಅವರು ಗೌತಮ ಬುದ್ಧ ಜಯಂತಿ ಆಚರಣೆಯ ಪೂರ್ವಭಾವಿ ಸಭೆ ನಡೆಸಿದರು.
* ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ
* ಉಡುಪಿಯಲ್ಲಿ ಆಚರಣೆಯ ಪೂರ್ವಭಾವಿ ಸಭೆ
ಉಡುಪಿ: ಸಮಾಜಕ್ಕೆ ಕೊಡುಗೆ ನೀಡಿದ ಅನೇಕ ಮಹನೀಯರು, ಸಂತರು, ದಾರ್ಶನಿಕರ ಸಂದೇಶ, ಅವರ ಜೀವನ ಮೌಲ್ಯಗಳನ್ನು ಜನಮಾನಸಕ್ಕೆ ತಿಳಿಸಲು ಮತ್ತು ಅವರೆಲ್ಲರ ಆಶಯ ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ವಿವಿಧ ಜಯಂತಿ ಆಚರಿಸಲಾಗುತ್ತದೆ. ಅದರಂತೆ ಮೇ 1ರಂದು ಅರ್ಥಪೂರ್ಣವಾಗಿ ಜಿಲ್ಲಾ ಮಟ್ಟದಲ್ಲಿ ಭಗವಾನ್ ಗೌತಮ ಬುದ್ಧ ಜಯಂತಿ ಆಚರಿಸಲಾಗುತ್ತಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದರು.
ಉಡುಪಿಯ ಡಿಸಿ ಕಚೇರಿ ಸಂಕೀರ್ಣದ ತಮ್ಮ ಕಚೇರಿಯಲ್ಲಿ ಸೋಮವಾರ (ಏ.13) ಆಯೋಜಿಸಿದ್ದ ಗೌತಮ ಬುದ್ಧ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿರು.
ಜಿಲ್ಲಾಡಳಿತ ಹಾಗೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಸಹಯೋಗದಲ್ಲಿ ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಅಗತ್ಯ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಸಮುದಾಯದವರನ್ನು ಆಹ್ವಾನಿಸಬೇಕು. ಶಾಂತಿ, ಅಹಿಂಸೆ ಹಾಗೂ ಮಾನವೀಯ ಸಂದೇಶ ಸಾರಿದ ಬುದ್ಧನ ಚಿಂತನೆ ತಿಳಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವ್ಯಾಪಕ ಪ್ರಚಾರ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಉಡುಪಿ ಇದರ ಅಧ್ಯಕ್ಷ ಅಜೆಯ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.