ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್‌ಫೋರ್ಸ್ ಸಭೆ ಕುಂದಾಪುರ ಸಭಾಂಗಣದಲ್ಲಿ ನಡೆಯಿತು. ಪ್ರಮುಖರಾದ ಶ್ರೀಕಾಂತ್ ಹೆಗ್ಡೆ, ರಾಮದಾಸ್, ರಾಕೇಶ್ ಫ್ರಾನ್ಸಿಸ್, ದಿನೇಶ್, ವಿವಿಧ ಇಲಾಖಾಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒ, ವಿಎಗಳು ಉಪಸ್ಥಿತರಿದ್ದರು.  
ಉಡುಪಿ

ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ

ಈ ಬಾರಿ ಎಲ್ಲ ಕಡೆಗಳಲ್ಲಿ ಮಳೆ ಕೊರತೆಯಿದ್ದು, ಮಳೆಗಾಲದಲ್ಲೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಬಹುದು. ಆದ್ದರಿಂದ ಸಂಬಂಧಪಟ್ಟ ಎಲ್ಲ ಗ್ರಾಪಂಗಳು, ಪುರಸಭೆ, ಪಪಂನವರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಸದ್ಯಕ್ಕೆ ತೊಂದರೆಯಿಲ್ಲ. ಆದರೆ ಮುಂದೇನು ಅನ್ನುವುದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.
ಕುಂದಾಪುರದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಾರಾಹಿ ನೀರಿನ ಆಶ್ರಯ

ಕ್ಷೇತ್ರದಲ್ಲಿ ಕಳೆದ ಬಾರಿಯೂ ನೀರಿನ ಸಮಸ್ಯೆ ಇರಲಿಲ್ಲ. ಈ ಬಾರಿಯೂ ಇರುವುದಿಲ್ಲ ಎಂಬ ಭರವಸೆಯಿದೆ. ಬಹುತೇಕ ಎಲ್ಲ ಗ್ರಾಪಂಗಳು ವಾರಾಹಿ ನೀರನ್ನೇ ಆಶ್ರಯಿಸಿದ್ದಾರೆ. ಆದಷ್ಟು ಬೇಗ ಬಾಕಿಯಿರುವ ಜೆಜೆಎಂ, ಅಮೃತ್ ಯೋಜನೆ ಕಾಮಗಾರಿ ಮುಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಕಾರ್ಯನಿರ್ವಹಿಸಿ, ನೀರಿನ ಕುರಿತಾದ ಬೇಡಿಕೆಗಳನ್ನು ಆದ್ಯತೆ ನೆಲೆಯಲ್ಲಿ ಬಗೆಹರಿಸಿ. ನಿರ್ಲಕ್ಷೃ ವಹಿಸಿದರೆ ಜಿಲ್ಲಾಧಿಕಾರಿ, ಸರ್ಕಾರಕ್ಕೆ ವರದಿ ಕೊಡಿ ಎಂದು ತಹಸೀಲ್ದಾರ್‌ಗಳಿಗೆ ಶಾಸಕರು ತಿಳಿಸಿದರು.
ಆವರ್ಸೆಯಲ್ಲಿ 2 ಕಡೆ ಬೋರ್‌ವೆಲ್ ಬೇಡಿಕೆ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಕುಂಭಾಶಿಯಲ್ಲಿ ಹೆದ್ದಾರಿ ಕಾಮಗಾರಿಯಿಂದ ಪೈಪ್ ಲೈನ್‌ಗೆ ಹಾನಿ, ಬೇಳೂರಲ್ಲಿ ಓವರ್ ಹೆಡ್ ಟ್ಯಾಂಕ್, ಮೊಳಹಳ್ಳಿಯ ಕೋಣೆಹರ, ಹೆಬ್ಗೋಳಿಯಲ್ಲಿ ಟ್ಯಾಂಕ್ ಇದ್ದರೂ ನೀರಿನ ಸಂಪರ್ಕ ಆಗಿಲ್ಲ. ಕೆದೂರು ಹೊಸ ಟ್ಯಾಂಕ್, ಮಡಾಮಕ್ಕಿಯ ಶೇಡಿಮನೆಯಲ್ಲಿ ಬೋರ್‌ವೆಲ್ ಬೇಕಿದೆ ಎಂದು ಪಿಡಿಒಗಳು ತಿಳಿಸಿದರು. ವಾರಾಹಿ ನೀರು ಬರುವ ತನಕ ನೀರಿನ ಸಮಸ್ಯೆ ಇಲ್ಲ ಎಂದು ಬಹುತೇಕ ಪಿಡಿಒಗಳು ತಿಳಿಸಿದರು.
ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಮದಾಸ್, ಹೆಬ್ರಿ ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್, ತಾಪಂ ಸಹಾಯಕ ನಿರ್ದೇಶಕ ದಿನೇಶ್, ವಿವಿಧ ಇಲಾಖಾಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒ, ವಿಎಗಳು ಉಪಸ್ಥಿತರಿದ್ದರು. ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ವಂದಿಸಿದರು.

ಶೇ.20ರಷ್ಟು ಮಳೆ ಕೊರತೆ

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಮಳೆಮಾಪನ ಕೇಂದ್ರಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸರಿಯಾದಂತಿಲ್ಲ. ಇದರಿಂದ ಬೆಳೆ ವಿಮೆಯಡಿ ಪರಿಹಾರ ಪಡೆಯುವ ರೈತರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ವಿಎಗಳು, ತಾಲೂಕುಮಟ್ಟದ ಅಧಿಕಾರಿಗಳು ಗಮನಹರಿಸಿ, ಸರಿಪಡಿಸಿ ಎಂದು ಶಾಸಕರು ಸೂಚಿಸಿದರು. ಕುಂದಾಪುರದಲ್ಲಿ ಈವರೆಗೆ 1,895 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 1,344 ಮಿ.ಮೀ. ಮಳೆಯಾಗಿದೆ. ಶೇ.20ರಷ್ಟು ಕೊರತೆಯಾಗಿದೆ. ರೈತರಿಂದ ಈವರೆಗೆ ಬೆಳೆಹಾನಿ, ನಷ್ಟದ ಬಗ್ಗೆ ಯಾವುದೇ ಅರ್ಜಿ ಬಂದಿಲ್ಲ. ಎಂಒ 4 ಸಹಿತ ಅಲ್ಪಾವಧಿಯ ಬಿತ್ತನೆ ಬೀಜವನ್ನು ದಾಸ್ತಾನು ಇರಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಶಾಸಕರು ಗರಂ

ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಚರ್ಚೆ ಶುರು ಮಾಡಿ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಬಾರದಿದ್ದರೆ ಸಭೆ ಯಾರಿಗೆ ಮಾಡುವುದು? ಎಲ್ಲೆಲ್ಲ ಸಮಸ್ಯೆ ಇದೆ? ಏನೆಲ್ಲ ಕಾಮಗಾರಿ ಆಗಿದೆ ನಿಮಗೆ ಗೊತ್ತಿದೆಯೇ? ನನಗೂ ಗೊತ್ತಿಲ್ಲ. ಅದನ್ನು ಸಭೆಗೆ ತಿಳಿಸುವವರೇ ಬಂದಿಲ್ಲ ಎಂದರೆ ಹೇಗೆ? ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಗರಂ ಆದರು. ಪೈಪ್‌ಲೈನ್ ಎಲ್ಲ ಕಡೆ ಮಾಡಿದ್ದಾರೆ. ರಸ್ತೆಗೂ ಸಮಸ್ಯೆ ಮಾಡಿದ್ದಾರೆ. ಆದರೆ ನೀರು ಮಾತ್ರ ಬರುತ್ತಿಲ್ಲ. ಪ್ರತಿ ಸಲ ಇದೇ ಉತ್ತರ ಕೇಳಿ ಸಾಕಾಗಿದೆ. ನಿಮಗೆ ಗೊತ್ತಿಲ್ಲದಿದ್ದರೆ ಗೊತ್ತಿರುವವರನ್ನು ಸಭೆಗೆ ಕಳುಹಿಸಿ. 3 ವರ್ಷಗಳಿಂದ ಇದೇ ಆಯಿತು. ನೀವು ಜವಾಬ್ದಾರಿ ತೆಗೊಳ್ಳದಿದ್ದರೆ, ನಾವು ಸಭೆ ನಡೆಸಿ ಏನು ಪ್ರಯೋಜನ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.