ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಬ್ಯಾನರ್ ಅನಾವರಣಗೊಳಿಸಲಾಯಿತು. ಪ್ರಮುಖರಾದ ಜಯಂತಿ ವಿ.ಪೂಜಾರಿ, ನಾರಾಯಣ ನಾಯ್ಕ, ಸಚಿನ್ ಕುಮಾರ್ ಉಪಸ್ಥಿತರಿದ್ದರು.
ಬಂಟ್ವಾಳ: ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ತಾಲೂಕು ಪಂಚಾಯಿತಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯಲ್ಲಿ ನಡೆಯಿತು.
ಗಡಿನಾಡ ವಿದ್ಯಾರ್ಥಿನಿಯರಿಗೆ ಬಸ್‌ಪಾಸ್ ವಿತರಿಸಲಾಗುತ್ತಿದ್ದು, ಮಂಗಳೂರು ಘಟಕ ಹಾಗೂ ಬಂಟ್ವಾಳ ಭಾಗದಲ್ಲಿ ನೆಲೆಸಿರುವ ಗಡಿನಾಡ ವಿದ್ಯಾರ್ಥಿನಿಯರಿಗೆ ಬಂಟ್ವಾಳ ಘಟಕದಲ್ಲಿ ಬಸ್ ಪಾಸ್ ವಿತರಿಸಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ಘಟಕದ ವ್ಯವಸ್ಥಾಪಕರು ತಿಳಿಸಿದರು. ಕಳೆದ ಸಭೆಯಲ್ಲಿ ತಿಳಿಸಿದಂತೆ ಕೆ.ಸಿ.ರೋಡ್‌ನಲ್ಲಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಂಭೂರು ಹಾಗೂ ಮೂಡಬಿದಿರೆ- ಬಿ.ಸಿ.ರೋಡ್ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಮಣಿಹಳ್ಳದಲ್ಲಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸದಸ್ಯರು ಆಗ್ರಹಿಸಿದರು.
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಮರಣ ಹೊಂದಿದದ 93 ಫಲಾನುಭವಿಗಳ ಪಟ್ಟಿ ಮಾಡಲಾಗಿದ್ದು, 5.22 ಲಕ್ಷ ರೂ. ರಿಕವರಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು. ಪಡಿತರ ಚೀಟಿ ಸಮಸ್ಯೆಯಿಂದ ಅರ್ಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಿದ್ದು, ಸಮಸ್ಯೆ ಸರಿಪಡಿಸಲು ಸಮಿತಿ ಸದಸ್ಯರು ಸಭೆ ಗಮನಕ್ಕೆ ತಂದರು.
ಆಗಸ್ಟ್ ಅಂತ್ಯದವರೆಗೆ ಗೃಹಜ್ಯೋತಿ ಯೋಜನೆಗೆ ಹೊಸ ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಈಗಾಗಲೇ ಮೆಸ್ಕಾಂನಿಂದ ಸಮೀಕ್ಷೆ ಕೈಗೊಳ್ಳಲಾಗಿದ್ದು, ಈ ಸಂದರ್ಭ ಅಗತ್ಯ ದಾಖಲೆ ನೀಡಿ ಸಹಕರಿಸಬೇಕು ಎಂದು ಮೆಸ್ಕಾಂ ಅಧಿಕಾರಿ ತಿಳಿಸಿದರು.
ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ, ಸಮಿತಿ ಸದಸ್ಯ ಕಾರ್ಯದರ್ಶಿ ಸಚಿನ್ ಕುಮಾರ್ ಉಪಸ್ಥಿತರಿದ್ದರು.