ರತೀಶ್​ ಕೆ.ಟಿ  
ಉಡುಪಿ

ಆ್ಯಸಿಡ್​ ದಾಳಿ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ಉಡುಪಿ: ಕೆಲಸದ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳದಿಂದ ಮಾಲೀಕನ ಮೇಲೆ ಬಿಸಿ ಕೆಮಿಕಲ್​ (ಆ್ಯಸಿಡ್​) ಎರಚಿ ಕೊಲೆಗೆ ಯತ್ನಿಸಿದ ಕೇರಳ ಮೂಲದ ಅಪರಾಧಿಗೆ ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಸಂಚಾರಿ ಪೀಠ ಕಾರ್ಕಳ) 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಕೇರಳ ಮೂಲದ ರತೀಶ್​ ಕೆ.ಟಿ (42) ಶಿಕ್ಷೆಗೊಳಗಾದವನು. 2022, ಫೆ. 28ರಂದು ಕೇರಳದ ತ್ರಿಶೂರ್​ ಜಿಲ್ಲೆಯ ಸುಧೀರ್​ ಪಿ.ಎ. ಎಂಬುವವರು ಹೆಬ್ರಿ ತಾಲೂಕಿನ ಚಾರ ಗ್ರಾಮದ ಮಂಡಾಡಿಜಡ್ಡು ಎಂಬಲ್ಲಿರುವ ಅಜಿತ್​ ಅಗಸ್ಟಿನ್​ ಎಂಬವರ ತೋಟಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸುಧೀರ್​ ಅವರು ರತೀಶ್​ಗೆ "ನೀನು ಸರಿಯಾಗಿ ರಬ್ಬರ್​ ಟ್ಯಾಪಿಂಗ್​ ಕೆಲಸ ಮಾಡುವುದಿಲ್ಲ, ಇಲ್ಲಿನ ಕೆಲಸಗಾರರನ್ನು ನೋಡಿ ಕಲಿ" ಎಂದು ಬುದ್ಧಿ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಉಂಟಾಗಿತ್ತು. ಇದೇ ದ್ವೇಷದಿಂದ ಮಾ.2ರಂದು ಬೆಳಗಿನ ಜಾವ 1 ಗಂಟೆಯ ಹೊತ್ತಿಗೆ ಸುಧೀರ್​ ಅವರು ಮಲಗಿದ್ದ ಜಾಗಕ್ಕೆ ಬಂದ ರತೀಶ್​ ಮುಖ ಮತ್ತು ಎದೆಯ ಭಾಗಕ್ಕೆ ಬಿಸಿ ಕೆಮಿಕಲ್​ ಎರಚಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸುಧೀರ್​ ಅವರು ನೀಡಿದ ದೂರಿನ ಮೇರೆಗೆ ಹೆಬ್ರಿ ಪೊಲೀಸ್​ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಸಮಗ್ರ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಾಾಧಾರಗಳನ್ನು ಪುರಸ್ಕರಿಸಿ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿದ್ದು, 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 30,000 ರೂ. ದಂಡ ವಿಧಿಸಿದೆ. ಅಪರಾಧಿ ರತೀಶ್​ ಕೆ.ಟಿ ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.