ನಿವೃತ್ತ ಡಾ.ಭಾಸ್ಕರ ಹೆಗ್ಡೆೆ ಅವರನ್ನು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂಶುಪಾಲ ರಾಕೇಶ್ ಕಮ್ಮಜೆ, ಪ್ರೊ.ವಿಶ್ವನಾಥ್ ಪಿ., ಪಿಜಿ ವಿಭಾಗದ ಡೀನ್ ಸೌಮ್ಯಾ ಕುಮಾರಿ ಮತ್ತಿತರರಿದ್ದರು.  
ಉಡುಪಿ

ಸ್ವ ಪ್ರಯತ್ನ, ಛಲದಿಂದ ಗುರಿ ಸಾಧನೆ

ಇಂದಿರಾ ಎನ್ ಕೆ
ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಪ್ರತಿಯೊಂದು ಅವಕಾಶಗಳು ಹೊಸ ಪಾಠ ಮತ್ತು ಅನುಭವ ನೀಡುತ್ತದೆ. ಆ ಅನುಭವದ ಮೂಲಕ ಭವಿಷ್ಯದ ದಾರಿಯನ್ನು ಕಂಡುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಕಾಲೇಜು ಜೀವನ ನೂರಾರು ಸಾಧನೆಗಳನ್ನು ಮಾಡಲು ದಾರಿಮಾಡಿ ಕೊಡುತ್ತದೆ. ಗುರು ಹಿರಿಯರ ಮಾರ್ಗದರ್ಶನದ ಜತೆಗೆ ಸ್ವ ಪ್ರಯತ್ನ ಹಾಗೂ ಛಲದಿಂದ ಹೆಜ್ಜೆ ಹಾಕಿದರೆ ಸಾಧನೆಯ ಗುರಿ ತಲುಪಬಹುದು ಎಂದು ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಜೆ ಹೇಳಿದರು.
ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಭಾಭವನದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಎಸ್‌ಡಿಎಂ ಕಾಲೇಜಿನ ಸಹಕಾರದಲ್ಲಿ 20ನೇ ಎಸ್‌ಡಿಎಂ ನೆನಪಿನಂಗಳ ಸರಣಿ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಡಿಎಂ ಹಿರಿಯ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಬಿ.ಕೆ.ಧನಂಜಯ ರಾವ್ ಅಧ್ಯಕ್ಷತೆ ವಹಿಸಿ, ಬದುಕಿನಲ್ಲಿ ಸಾಧನೆ ಪಥದಲ್ಲಿ ಸಾಗುತ್ತಾ ಹೋದ ಹಾಗೆ ನಾವು ಶ್ರೇಷ್ಠರೆನಿಸಿಕೊಳ್ಳುತ್ತೇವೆ. ಇದಕ್ಕೆಲ್ಲ ಪ್ರೇರಣೆಯಾದ ನಮ್ಮ ಶಾಲೆ ಹಾಗೂ ಕಾಲೇಜು ದಿನಗಳು ಸದಾ ನೆನಪಿನಲ್ಲಿ ಸ್ಮರಣೀಯವಾಗಿರುತ್ತದೆ ಎಂದರು.
ರಾಕೇಶ್ ಕಮ್ಮಜೆ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ., ಪಿಜಿ ವಿಭಾಗದ ಡೀನ್ ಸೌಮ್ಯಾ, ಬೋಧಕ ಮತ್ತು ಬೋಧಕೇತರರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಸ್‌ಡಿಎಂ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಸಿಂಧು ಅವರಿಗೆ ವಿದ್ಯಾರ್ಥಿ ವೇತನ ವಿತರಸಲಾಯಿತು. ಉಜಿರೆ ಎಸ್‌ಡಿಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ದಿ.ಪ್ರೊ.ಎಸ್.ಪ್ರಭಾಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ಉಪನ್ಯಾಸಕ ಶಿವಕುಮಾರ್ ನಿರೂಪಿಸಿದರು. ಉಪನ್ಯಾಸಕ ಅಭಿಲಾಶ್ ವಂದಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಕಾರ್ಯಕ್ರಮ ಸಂಯೋಜಿಸಿದರು. ಉಪನ್ಯಾಸಕರಾದ ಡಾ.ದಿವಾಕರ ಕೊಕ್ಕಡ ಮತ್ತು ದೀಕ್ಷಿತ್ ರೈ ಸಹಕರಿಸಿದರು.

ಡಾ.ಭಾಸ್ಕರ್ ಹೆಗ್ಡೆಗೆ ಸನ್ಮಾನ

ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ 33 ವರ್ಷಗಳ ಕಾಲ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಭಾಸ್ಕರ ಹೆಗ್ಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ, ದಕ್ಷ ನಾಯಕತ್ವ ಮತ್ತು ಮೌಲ್ಯಯುತವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಭಾಸ್ಕರ ಹೆಗ್ಡೆ ಅವರ ಪಾತ್ರ ಅನನ್ಯವಾದುದು.