ಗೂಂಡಾ ಕಾಯಿದೆಯಡಿ ಬಂಧಿಸಲ್ಪಟ್ಟ ಆರೋಪಿ ಜಗದೀಶ್ ಎಸ್. ಪೂಜಾರಿ.
* ಮಾದಕ ದ್ರವ್ಯ ಸಾಗಾಟ-ಮಾರಾಟ ಹಿನ್ನೆಲೆ
* ಕಲಬುರ್ಗಿಯ ಕೇಂದ್ರ ಕಾರಾಗೃಹಕ್ಕೆ ರವಾನೆ
ಉಡುಪಿ: ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿ ಮಣಿಪಾಲ ಠಾಣಾ ಪೊಲೀಶರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ರಾಜೀವ ನಗರ ಎರಡನೇ ಕ್ರಾಸ್ನಲ್ಲಿದ್ದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಜಗದೀಶ್ ಎಸ್. ಪೂಜಾರಿ (33) ಬಂಧಿತ ಆರೋಪಿ.
ಬಂಧಿತ ಆಸಾಮಿಯ ವಿರುದ್ಧ ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಸೆನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿ ಒಟ್ಟು 3 ಪ್ರಕರಣ ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ 2 ಪ್ರಕರಣ ದಾಖಲಾಗಿದೆ. ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿ ದಾಖಲಾದ ಪ್ರಕರಣಗಳಲ್ಲಿ 1 ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಉಳಿದ 2 ಪ್ರಕರಣ ತನಿಖೆಯಲ್ಲಿದೆ. ದಾಖಲಾಗಿರುವ ಮಾದಕ ದ್ರವ್ಯ ಸೇವನೆಯ 2 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ.
ಆರೋಪಿಯನ್ನು ಪಿಐಟಿ, ಎನ್ಡಿಪಿಎಸ್ ಕಾಯಿದೆಯಡಿ ಬಂಧಿಸಲು ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್ ಅವರ ವರದಿಯ ಮೇರೆಗೆ ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರು ಬಂಧನ ಆದೇಶ ಹೊರಡಿಸಿದ್ದರು.
ಬಂಧಿತ ಆರೋಪಿಯನ್ನು ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.