Crime 
ಉಡುಪಿ

ಪರಶಿನಿಕಡವು ಕೊಲೆ ಪ್ರಕರಣ ಆರೋಪಿ ಸೆರೆ

ಕಾಸರಗೋಡು: ಪರಶಿನಿಕಡವು ಸಮೀಪದ ಮಾಂಕಡವು ಎಂಬಲ್ಲಿ ಜಲಾಲ್ ಎಂಬುವರನ್ನು ಇರಿದು ಕೊಲೆಗೈದ ಪ್ರಕರಣದಲ್ಲಿ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಾಳಯಿಲ್ ನಿವಾಸಿ ಮುಹಮ್ಮದ್ ಅಲಿ(55) ಎಂಬಾತನನ್ನು ಕಣ್ಣೂರು ಸಿಟಿ ಪೊಲೀಸರ ಪ್ರತ್ಯೇಕ ತನಿಖಾ ತಂಡ ಉಪ್ಪಳದಲ್ಲಿ ಬಂಧಿಸಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 2010 ಸೆಪ್ಟೆಂಬರ್ 17ರಂದು ಪರಶಿನಿಕಡವಿನ ಮಾಂಕಡವಿನಲ್ಲಿ ಮೊಯ್ದು ಎಂಬುವರ ಮಕ್ಕಳಾದ ಜಲಾಲ್ ಹಾಗೂ ಶಂಸೀರ್ ಅವರನ್ನು ಕೊಲೆಗೈಯ್ಯಲು ಮೊಯ್ದು ಅವರ ಸಹೋದರಿಯ ಪತಿ ಮುಹಮ್ಮದ್ ಅಲಿ ಸಂಚು ಹೂಡಿದ್ದ. ಈ ವೇಳೆ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದು ಜಲೀಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶಂಸೀರ್ ಕೂಡಾ ಇರಿತದಿಂದ ಗಂಭೀರ ಗಾಯಗೊಂಡಿದ್ದು, ನಂತರ ಚೇತರಿಸಿಕೊಂಡಿದ್ದರು. ವಳಪಟ್ಟಣ ಪೊಲೀಸರು ಆರೋಪಿ ಮುಹಮ್ಮದ್ ಅಲಿಯನ್ನು ಬಂಧಿಸಿದ್ದರು.
ಜಾಮೀನಿನಲ್ಲಿ ಬಿಡುಗಡೆಗೊಂಡ ಈತ ನ್ಯಾಯಾಲಯಕ್ಕೆ ಹಾಜರಾಗದೆ ಕರ್ನಾಟಕದ ವಿವಿಧೆಡೆ ತಲೆಮರೆಸಿಕೊಂಡು ಅಡುಗೆ ಕಾರ್ಮಿಕನಾಗಿ, ಬೀದಿ ಬದಿ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಿದ್ದ. ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು.

ನಕಲಿ ಚಿನ್ನ ನೀಡಿ ವಂಚಿಸಿದ ಮಹಿಳೆ ಬಂಧನ

ಕಾಸರಗೋಡು: ನಕಲಿ ಚಿನ್ನದ ಸರ ನೀಡಿ ಐದು ಲಕ್ಷ ರೂ. ವಂಚಿಸಿದ ಪ್ರಕರಣದ ಆರೋಪಿ ಕರ್ನಾಟಕ ನಿವಾಸಿ ಶಾಂತಿ(50) ಎಂಬಾಕೆಯನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ರಾಜು ಎಂಬಾತ ತಲೆಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ತ್ರಿಕರಿಪುರ ಕೋಯಂಗರ ನಿವಾಸಿ ಎಂ.ಅನೀಶ್ ಎಂಬುವರು ನೀಡಿರುವ ದೂರಿನನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಆ.30ರಂದು ಬೆಳಗ್ಗೆ ಆರೋಪಿಗಳು ಚೆರ್ವತ್ತೂರಿನ ಚಿತ್ರಮಂದಿರವೊಂದರ ಬಳಿ ನಕಲಿ ಚಿನ್ನದ ಸರ ನೀಡಿ, 5 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಅನೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ

ಕಾಸರಗೋಡು: ನಕಲಿ ಚಿನ್ನಾಭರಣ ಅಡವಿಟ್ಟು 11,44,000 ರೂ. ಸಾಲ ಪಡೆದು ವಂಚಿಸಿರುವ ಬಗ್ಗೆ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಕಾಸರಗೋಡು ಬ್ರಾೃಂಚ್ ಮ್ಯಾನೇಜರ್ ಯು.ಪಿ.ಕಿರಣ್ ಕುಮಾರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಯಿನಾಚಿ ಚೆರುಕರ ನಿವಾಸಿ ಅಬ್ದುಲ್ ಮಜೀದ್(52) ವಿರುದ್ಧ ಕೇಸು ದಾಖಲಾಗಿದೆ. 2026 ಫೆಬ್ರವರಿ 25ರಂದು 108.407 ಗ್ರಾಂ ತೂಕದ ಎರಡು ನಕಲಿ ಬಳೆಗಳು, ಒಂದು ನೆಕ್ಲೇಸ್ ಅಡವಿಟ್ಟು ಹಣ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.