ಉಡುಪಿ: ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ಬಳಿಕ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಶ್ರೀಮಂತ ಉದ್ಯಮಿಗಳಿಗೆ ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡಿ ಕೋಟ್ಯಂತರ ರೂ. ಹಪ್ತಾ ಬೇಡಿಕೆ ಇಟ್ಟು, ಜೀವ ಬೆದರಿಕೆಯೊಡ್ಡುತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಸಹಕರಿಸಿದ್ದ ಮುಖ್ಯ ಸಹಚರನನ್ನು ಶಿರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಂತೂರು ಗ್ರಾಮದ ನಿವಾಸಿ ಹರೀಶ್ ಪೂಜಾರಿ (45) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಲಾಗಿದ್ದ 2 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಿರ್ವ ಠಾಣೆಯಲ್ಲಿ ದಾಖಲಾದ ಬೆದರಿಕೆ ಕರೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಸಾಂತೂರಿನ ಹರೀಶ್ ಪೂಜಾರಿ ಸುಳಿವು ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನೈಜ ಕೃತ್ಯ ಹೊರಬಿದ್ದಿದೆ. ಶ್ರೀಮಂತ ಉದ್ಯಮಿಗಳ ಹಾಗೂ ಶಿರ್ವ ಠಾಣಾ ವ್ಯಾಪ್ತಿಯ ದೂರುದಾರರ ಮೊಬೈಲ್ ನಂಬರ್ಗಳನ್ನು ಭೂಗತ ಪಾತಕಿ ಹೇಮಂತ್ ಪೂಜಾರಿಗೆ ನೀಡಿದ್ದು, ಹಪ್ತಾ ವಸೂಲಿ ಕೃತ್ಯಕ್ಕೆ ಸಹಕಾರ ನೀಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
8 ಪ್ರಕರಣಗಳು ದಾಖಲು
ಭೂಗತ ಪಾತಕಿ ಹೇಮಂತ್ ಪೂಜಾರಿ, ಉಡುಪಿ ಜಿಲ್ಲೆಯ ಪಡುಬಿದ್ರೆ, ಮಣಿಪಾಲ, ಕಾಪು ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಪ್ರಮುಖರನ್ನು ಗುರಿಯಾಗಿಸಿಕೊಂಡಿದ್ದ. ಇಂಟರ್ನ್ಯಾಶನಲ್ ನಂಬರ್ಗಳಿಂದ ಕರೆ ಮಾಡಿ ಕೊಟ್ಯಾಂತರ ರೂಪಾಯಿ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದಲ್ಲಿ ಡೇವಿಡ್ ಡಿಸೋಜಾ ಶೈಲಿಯಲ್ಲೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡುತ್ತಿದ್ದ. ಈ ಸಂಬಂಧ ನಾಲ್ಕೂ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು.