ಉಡುಪಿಯ ಪತ್ರಿಕಾ ಭವನದಲ್ಲಿ ಹೊಸಾಳ ಗ್ರಾಮದ ದಿನೇಶ್ ಗಾಣಿಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಂದ್ರ ಕಾಂಚನ್, ಕೃಷ್ಣ ಎನ್. ಬಂಗೇರ, ಆಶಾ, ಗಿರಿಜಾ ರಂಗ ಮರಕಾಲ ಇದ್ದರು.
* ಬ್ರಹ್ಮಾವರ ಹೊಸಾಳ ಗ್ರಾಮಸ್ಥರ ಆಕ್ರೋಶ
* ಡಿಸಿ ಕಚೇರಿ ಬಳಿ ಏ.15ರಿಂದ ಉಪವಾಸ ಧರಣಿ
* ಗ್ರಾಮದ ಪ್ರಮುಖ ದಿನೇಶ್ ಗಾಣಿಗ ಮಾಹಿತಿ
* ಏ.13,14ರಂದು ಸೀತಾನದಿ ದಂಡೆಯಲ್ಲೂ ಧರಣಿ
ಉಡುಪಿ: ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠ ವ್ಯಾಪ್ತಿಯ ಸೀತಾನದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯಬೇಕಿದ್ದ ಉಡುಪಿ ಜಿಲ್ಲಾಧಿಕಾರಿಯೇ ಅಕ್ರಮ ದಂಧೆಕೋರರಿಗೆ ಶಾಮೀಲಾಗಿದ್ದಾರೆ. ಅಕ್ರಮ ಮರಳುಗಾರಿಕೆಯಿಂದ ಈ ಭಾಗದ ಕೃಷಿ ಭೂಮಿ ಹಾನಿಗೊಳ್ಳುತ್ತಿದ್ದು, ಸುತ್ತಲಿನ 150ಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಖಂಡಿಸಿ ಗ್ರಾಮದ ಸಂತ್ರಸ್ಥರೆಲ್ಲರೂ ಏ.15ರಿಂದ ಉಡುಪಿಯ ಡಿಸಿ ಕಚೇರಿಯ ಬಳಿ ಅನಿರ್ದಿಷ್ಟಾವಧಿಯ ಉಪವಾಸ ಧರಣಿ ನಡೆಸಲಿದ್ದೇವೆ ಎಂದು ಗ್ರಾಮದ ಪ್ರಮುಖ ದಿನೇಶ್ ಗಾಣಿಗ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಏ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಕುರಿತು ದಾಖಲೆ ಸಮೇತ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರಿಗೆ ನೀಡಿದ್ದೇವೆ. ಒಮ್ಮೆ ಸ್ಥಳಕ್ಕೆ ಬಂದು ಪರಿಶೀಲಿಸುವಂತೆ ಅನೇಕ ಬಾರಿ ಮನವಿ ನೀಡಿದರೂ ಸಹ ಸ್ಪಂದಿಸುತ್ತಿಲ್ಲ. ಕೋರ್ಟ್ಗೆ ಹೋಗಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ. ಅಕ್ರಮ ಮರಳುಗಾರಿಕೆ ತಡೆಯಬೇಕಿದ್ದ ಡಿಸಿ, ಇದೀಗ ಕಳೆದ ಒಂದು ವಾರದಿಂದ ಪೊಲೀಸ್ ಭದ್ರತೆಯಲ್ಲಿ ಮರಳುಗಾರಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ದೂರಿದರು.
ಶಾಸಕ-ಸಂಸದರ ಮಾತಿಗೂ ಇಲ್ಲ ಬೆಲೆ
ಗ್ರಾಮದ ಚಂದ್ರ ಕಾಂಚನ್ ಮಾತನಾಡಿ, ಪರಿಸರ ವಿಮೋಚನಾ ಪತ್ರದಲ್ಲಿ 1 ಮೀಟರ್ ಆಳದಲ್ಲಿ ಮಾತ್ರ ಮರಳು ತೆಗೆಯಲು ಆದೇಶವಿದ್ದರೂ 3-4 ಮೀಟರ್ ತೆಗೆಯಲಾಗುತ್ತಿದೆ. ಸೀತಾ ನದಿಯಲ್ಲಿ ಹಾಕಿರುವ ಬಾಲ್ ಪಾಯಿಂಟ್ನಲ್ಲಿ 2ರಿಂದ 6 ಮೀಟರ್ ಆಳದಲ್ಲಿ ಮರಳಿದೆ. ಇದನ್ನು ತೆಗೆಯಲು ಕಾನೂನುನಲ್ಲಿ ಆದೇಶವಿಲ್ಲ. ಶಾಸಕರು, ಸಂಸದರು ಈ ವಿಚಾರವಾಗಿ ಮಾತನಾಡಿದರೂ ಡಿಸಿ ಕ್ಯಾರೇ ಮಾಡುತ್ತಿಲ್ಲ. ಸಾಂಪ್ರದಾಯಿಕ ದೋಣಿಯಲ್ಲಿ ಮಾತ್ರ 30ರಷ್ಟು ಕಾರ್ಮಿಕರನ್ನು ಬಳಸಿ ಮರಳುಗಾರಿಕೆ ಮಾಡಬೇಕಿದೆ. ಆದರೂ 60-70ರಷ್ಟು ದೊಡ್ಡ ಪ್ರಮಾಣದ ದೋಣಿಯಲ್ಲಿ 200ಕ್ಕೂ ಅಧಿಕ ಕಾರ್ಮಿಕರನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ. ಇದರಿಂದ ಸೀತಾ ನದಿಯ ಒಡಲು ಇನ್ನಷ್ಟು ಅಗಲವಾಗಿ ಮಳೆಗಾಲದಲ್ಲಿ ನೆರೆ ಬಂದು ಜನರು ಗುಳೆ ಹೋಗುವ ಪರಿಸ್ಥಿತಿ ಬರಲಿದೆ. ಏ.13 ಮತ್ತು 14ರಂದು ಸೀತಾ ನದಿಯ ದಂಡೆಯಲ್ಲಿ ಸಾಂಕೇತಿಕ ಧರಣಿ ಮಾಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೃಷ್ಣ ಎನ್. ಬಂಗೇರ, ಆಶಾ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಡಿಸಿ ಸ್ವರೂಪಾ ವಿರುದ್ಧ ಲೋಕಾಯುಕ್ತಕ್ಕೆ ದೂರು
ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇ-ಟೆಂಡರ್ ಮೂಲಕ ಡಿಎಸ್ಬಿ 5ರಲ್ಲಿ 1,13,736 ಮೆಟ್ರಿಕ್ ಟನ್ ಮರಳು ಮತ್ತು ಕೆಆರ್ಐಡಿಎಲ್ ಮೂಲಕ ಡಿಎಸ್ಬಿ-1ರ ಮೂಕ 18,790 ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ನೀಡಲಾಗಿದೆ. ತಜ್ಞರೋರ್ವರ ಮೂಲಕ ಅಲ್ಲಿ ಅಧ್ಯಯನ ನಡೆಸಿದಾಗ ಸೂಚಿತ ಸೀತಾ ನದಿಯಲ್ಲಿ ಅಷ್ಟೊಂದು ಪ್ರಮಾಣದ ಮರಳು ಲಭ್ಯವಿಲ್ಲ ಎಂಬ ವರದಿ ನೀಡಿದ್ದಾರೆ. ಆದರೂ 2024ರ ಜ.16ರಂದು ಸ.ನಂ. 91ರಲ್ಲಿ 6 ಎಕರೆ ಸ್ಥಳಕ್ಕೆ ಟೆಂಡರ್ ಆಗಿದ್ದು, 2024ರ ನ.8ರಂದು ಬಿ.ಕುಶಕುಮಾರ್ ಎಂಬರಿಗೆ ಗುತ್ತಿಗೆ ಲಭಿಸಿದೆ. ಪುನ; ನ.16ರಂದು (ವಾರದ ಬಳಿಕ) ಕುಶಕುಮಾರ್ ಅವರಿಗೆ ಮತ್ತೊಂದು ತಿದ್ದುಪಡಿ ಆಶಯ ಪತ್ರ ನೀಡಿದ ಜಿಲ್ಲಾಧಿಕಾರಿಗಳು, ಸ.ನಂ. 91ರಲ್ಲಿ 6 ಎಕರೆ ಸ್ಥಳದ ಬದಲಾಗಿ ಸ.ನಂ. 114 ಮತ್ತು 140ರಲ್ಲಿ 8.90 ಎಕರೆ ಎಂದು ಸ್ಥಳದ ಬದಲಾವಣೆ ಮಾಡಿದ್ದಾರೆ. ಸರ್ಕಾರಿ ಕಾಮಗಾರಿಗಳಿಗೆ ಟನ್ ಮರಳಿಗೆ 700 ರೂ. ಪಡೆಯಬೇಕೆಂದು ಸರ್ಕಾರ ಆದೇಶಿಸಿದ್ದರೂ ಸಹ 130 ರೂ. ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ತಹಸೀಲ್ದಾರರು, ಗ್ರಾಪಂನವರು ವರದಿ ನೀಡಿದರೂ ಡಿಸಿ ಗಮನವನ್ನೇ ನೀಡುತ್ತಿಲ್ಲ. ಅವರ ವರ್ತನೆ ವಿರುದ್ಧ, ಅಕ್ರಮ ದಂಧೆಗೆ ಸಹಕರಿಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಗಣಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಹಸಿರು ನ್ಯಾಯಾಲಯದಲ್ಲೂ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ದಿನೇಶ್ ಗಾಣಿಗ ತಿಳಿಸಿದರು.
ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಸೀತಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತದೆ. ನದಿ ದಂಡೆಯಲ್ಲಿ 150ಕ್ಕೂ ಅಧಿಕ ಮನೆಗಳಿದ್ದು, ಅಕ್ರಮ ಮರಳುಗಾರಿಕೆಯಿಂದ ಎಲ್ಲರ ಮನೆಯ ಬಾವಿಗಳ ನೀರು ಕಲುಷಿತಗೊಂಡಿದೆ. ನೀರಿನ ಬಣ್ಣವೂ ಬದಲಾಗಿದ್ದು, ರುಚಿ ಉಪ್ಪಾಗಿದ್ದು ಕುಡಿಯಲು ಆಗುತ್ತಿಲ್ಲ. ಜಲ ಜೀವನ್ ಯೋಜನೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಬಾವಿ ತೋಡಿದ್ದು ಅದರಲ್ಲೂ ಈಗ ಉಪ್ಪು ನೀರು ಬಂದಿದೆ. ದೂರು ಕೊಟ್ಟರೆ ಯಾರೂ ಕ್ರಮಕೈಗೊಳ್ಳುತ್ತಿಲ್ಲ.