ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರತಾಪ್‌ಸಿಂಹ ನಾಯಕ್, ಹರೀಶ್ ಆರಿಕೋಡಿ, ಹರೀಶ್ ಪೂಂಜ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಧರ್ಮ ಮತ್ತು ಕೀರ್ತಿ ಸಂಗ್ರಹಕ್ಕೆ ದೇವರ ಸೇವೆ, ಪರೋಪಕಾರ, ದಾನ-ಧರ್ಮ ಇತ್ಯಾದಿ ಪುಣ್ಯ ಕಾರ್ಯ ಮಾಡಬೇಕು. ಬದುಕಿನ ಯಥಾರ್ಥ ತಿಳಿಸುವ ಕೆಲಸಗಳು ಬ್ರಹ್ಮಕಲಶಗಳ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿವೆ. ಪಾಪ-ಕರ್ಮಗಳನ್ನು ಭಗವಂತನ ಸೇವೆ ಮೂಲಕ ದೂರ ಮಾಡಬಹುದು. ದೇವರನ್ನು ಸ್ಮರಿಸುತ್ತಾ ಬದುಕಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನಾತನ ಪರಂಪರೆಯಲ್ಲಿ ಸಾಧುಗಳಿಗೆ ಅತಿ ದೊಡ್ಡ ಸ್ಥಾನಮಾನ ಇದೆ. ಅಧ್ಯಾತಿಕ ಪರಂಪರೆಯಲ್ಲಿ ದೇವರು ಬೇರೆ-ಬೇರೆ ರೀತಿಗಳಲ್ಲಿ ಸೂಚನೆ ನೀಡುತ್ತಾನೆ. ನಮ್ಮ ಕೆಲಸಕ್ಕೆ ಸಾರ್ಥಕತೆ ದೇವರು ನೀಡುತ್ತಾನೆ ಎಂದರು.
ಆರಿಕೋಡಿ ಚಾಮುಂಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮಾತನಾಡಿ, ಕರಾವಳಿಯಲ್ಲಿ ಪ್ರಕೃತಿಯನ್ನು ಆರಾಧಿಸುವ ಜನರು ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಾರೆ. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶ ಮಾದರಿ ಬ್ರಹ್ಮಕಲಶೋತ್ಸವ ಆಗುತ್ತಿದೆ ಎಂದರು.
ಶಾಸಕ ಹರೀಶ್ ಪೂಂಜ, ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ವಿಭಾಗದ ಸಿಇಒ ಪೂರನ್ ವರ್ಮ, ವಕೀಲ ಬಿ.ಕೆ.ಧನಂಜಯ ರಾವ್, ಉಜಿರೆ ಕಾಲಭೈರವೇಶ್ವರ ಒಕ್ಕಲಿಗರ ಸಹಕಾರ ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ, ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್, ಉಜಿರೆ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಶಶಿಕಲಾ ದೇವಪ್ಪ ಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಉಪಸ್ಥಿತರಿದ್ದರು.
ರಾಜಗೋಪುರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ ಸ್ವಾಗತಿಸಿದರು. ಉಪನ್ಯಾಸಕ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಸುರ್ಯ ವಂದಿಸಿದರು. ಜಗದೊಡೆಯ ಜನಾರ್ದನ ಮತ್ತು ನಂದಾದೀಪ ಧ್ವನಿ ಸುರುಳಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.