ಅಪಘಾತದಿಂದ ಕಾರು ಹಾನಿಗೀಡಾಗಿರುವುದು.  
ಉಡುಪಿ

ಬಡಾಕೆರೆ ಕ್ರಾಸ್‌ನಲ್ಲಿ ಅಪಘಾತ, ಏಳು ಮಂದಿಗೆ ಗಾಯ

ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಗಳು ಪ್ರಕರಣ ದಾಖಲು

ಬೈಂದೂರು: ನಾವುಂದ ಬಡಾಕೆರೆ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ ಸಮೀಪ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಅರೆಹೊಳೆ ಬೈಪಾಸ್ ಕಡೆಯಿಂದ ಕುಂದಾಪುರದತ್ತ ಬರುತ್ತಿದ್ದ ಕಾರು ಹಾಗೂ ಕುಂದಾಪುರದಿಂದ ಶಿರೂರು ಕಡೆಗೆ ತೆರಳುತ್ತಿದ್ದ ಮತ್ತೊಂದು ಕಾರು ನಡುವೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಪ್ರತಿ ಸಲವೂ ಹಲವಾರು ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಡಾಕೆರೆ ಕಡೆಯಿಂದ ಬರುವ ವಾಹನಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಬಂದು ನಿಲ್ಲುವ ಪರಿಸ್ಥಿತಿ ಇರುವುದರಿಂದ, ಇಲ್ಲಿ ಸೂಕ್ತ ಸರ್ವಿಸ್ ರಸ್ತೆ, ತಿರುವು ಹಾಗೂ ಸಂಚಾರ ನಿಯಂತ್ರಣ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತಗಳು ಮರುಕಳಿಸದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿರುವ ರಸ್ತೆ ಸುರಕ್ಷತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬಡಾಕೆರೆ ಕ್ರಾಸ್‌ನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ವಾಹನಗಳ ಸಂಚಾರದ ಮೇಲೆ ನಿಗಾ ವಹಿಸುವುದು ಅತ್ಯಗತ್ಯ. ಅಪಘಾತಗಳ ಮರುಕಳಿಸುವುದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.