ಮಣಿಪಾಲದಲ್ಲಿ ವಿವಿಧ ಕ್ಷೇತ್ರದ ಐವರು ವಿದ್ಯಾರ್ಥಿಗಳಿಗೆ ಪ್ರಮಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೊ. ಕೆ.ಸದಾಶಿವ ರಾವ್​, ಡಾ.ಅನುಸೂಯಾದೇವಿ, ದೇವಕಿ ಕೆ. ಭಟ್​, ಪವನಾ ಬಿ. ಆಚಾರ್​, ಡಾ.ಬಾಲಚಂದ್ರ ಆಚಾರ್​, ಸಂಹಿತಾ ಜಿ.ಪಿ. ಇದ್ದರು. 
ಉಡುಪಿ

ಸೋಲನ್ನೂ ಸಕಾರಾತ್ಮಕವಾಗಿಯೇ ಸ್ವೀಕರಿಸಿ

ಪ್ರಶಾಂತ ಜಿ. ಭಾಗ್ವತ

ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾ ಪ್ರಶಸ್ತಿ ಪ್ರದಾನ

ಉಡುಪಿ: ಹೆತ್ತವರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ವೈಯಕ್ತಿಕ ಶ್ರಮದಿಂದ ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆ ಅರಳಲು ಸಾಧ್ಯ. ಸಾಧನೆಯ ಹಾದಿಯಲ್ಲಿ ಅನುಭವಿಸುವ ಸೋಲನ್ನೂ ಸಹ ಸಕಾರಾತ್ಮಕವಾಗಿಯೇ ಒಪ್ಪಿಕೊಳ್ಳುವ ಆತ್ಮಬಲವನ್ನು ಮಕ್ಕಳಲ್ಲಿ ರೂಢಿಸಬೇಕು. ಪ್ರಶಸ್ತಿ ಗಳಿಕೆಗಾಗಿ ಸಾಧನೆ ಮಾಡುವಂತಾಗಬಾರದು. ಸಾಧನೆಯೇ ಮುಖ್ಯ ಗುರಿಯಾಗಿರಬೇಕು ಎಮದು ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ಸದಾಶಿವ ರಾವ್​ ಕಿವಿಮಾತು ಹೇಳಿದರು.
ಮಣಿಪಾಲದಲ್ಲಿ ಡಾ. ಪಳ್ಳತ್ತಡ್ಕ ಕೇಶವ ಭಟ್​ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ 16ರ ವಯಸ್ಸಿನೊಳಗಿನ ಐದು ಸಾಧಕ ಬಾಲ ಪ್ರತಿಭೆಗಳಿಗೆ 12ನೇ ವರ್ಷದ ಪ್ರಮಾ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗಳು
 ಪಾಲಿಮಾರು ಯೋಗ ದೀಪಿಕಾ ವಿದ್ಯಾಪಿಠದ ಶ್ರೀಶ ಭಟ್​ ಕನ್ನರ್ಪಾಡಿ (ವೇದ), ಮಂಗಳೂರಿನ ಮೌಂಟ್​ ಕಾರ್ಮೆಲ್​ ಸೆಂಟ್ರಲ್​ ಸ್ಕೂಲ್​ನ 7ನೇ ತರಗತಿಯ ವಿದ್ಯಾರ್ಥಿನಿ ಆದ್ಯಾ ಯು. (ತಬಲಾ), ಪುತ್ತೂರು ವಿವೇಕಾನಂದ ಸೆಂಟ್ರಲ್​ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಆಪ್ತಾ ಚಂದ್ರಮತಿ ಮುಳಿಯ (ವಿಜ್ಞಾನ), ಮಣಿಪಾಲದ ಮಾಧವ ಕೃಪಾ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಸ್ವಸ್ತಿ ಎಂ. ಭಟ್​ (ಸಂಗೀತ), ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸುಶಾಂತ್​ ಎಸ್​. ಭಟ್​ (ಯಕ್ಷಗಾನ) ಇವರಿಗೆ ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಟ್ರಸ್ಟ್​ನ ಪರವಾಗಿ ಡಾ.ಅನುಸೂಯಾದೇವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಳ್ಳತ್ತಡ್ಕ ಕೇಶವ ಭಟ್​ ಅವರ ಮೊಮ್ಮಗಳಾದ ಪ್ರಮಾ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್​ನ ಅಧ್ಯಕ್ಷೆ ದೇವಕಿ ಕೆ. ಭಟ್​, ವಿದುಷಿ ಪವನಾ ಬಿ. ಆಚಾರ್​ ಉಪಸ್ಥಿತರಿದ್ದರು. ಡಾ.ಬಾಲಚಂದ್ರ ಆಚಾರ್​ ವಂದಿಸಿದರು. ಸಂಹಿತಾ ಜಿ.ಪಿ. ಕಾರ್ಯಕ್ರಮ ನಿರ್ವಹಿಸಿದರು.