ಗಂಗೊಳ್ಳಿ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡಿವೆ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗಂಗೊಳ್ಳಿ ಬಂದರಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆದುಕೊಂಡಿದ್ದು, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ರಾಜ್ಯ ಸರ್ಕಾರದ ಜಂಟಿ ಯೋಜನೆಯಡಿ 22.14 ಕೋಟಿ ರೂ. ವೆಚ್ಚದಲ್ಲಿ ಐದು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಕುಸಿದ ಜೆಟ್ಟಿ ಮರು ನಿರ್ಮಾಣಕ್ಕೆ ಇನ್ನೂ ಚಾಲನೆ ದೊರಕಿಲ್ಲ.
ಬಂದರಿನ ಹಳೆಯ ಜೆಟ್ಟಿ ಸಮೀಪ ಎರಡು ಮೀನುಗಾರಿಕಾ ಪ್ರಾಂಗಣ, ಎರಡು ವಿಶ್ರಾಂತಿ ಗೃಹ, ಸಂಪರ್ಕ ರಸ್ತೆ ಹಾಗೂ ಆವರಣಗೋಡೆ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಮೀನುಗಾರರಿಗೆ ಅಗತ್ಯ ಮೂಲಸೌಕರ್ಯಗಳು ಬಲವಾಗಲಿವೆ.
ಕುಸಿದ ಜೆಟ್ಟಿ ಇನ್ನೂ ಮೇಲೇಳಿಲ್ಲ
2018ರಲ್ಲಿ ಗಂಗೊಳ್ಳಿ ಬಂದರ್‌ನ ಜೆಟ್ಟಿ ಕುಸಿದ ಬಳಿಕ 12 ಕೋಟಿ ರೂ. ವೆಚ್ಚದಲ್ಲಿ 379 ಮೀಟರ್ ಉದ್ದದ ಹೊಸ ಜೆಟ್ಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ 2022ರಲ್ಲಿ ನಿರ್ಮಾಣ ಹಂತದಲ್ಲೇ 50 ಮೀಟರ್ ಉದ್ದದ ಜೆಟ್ಟಿ ಸಮುದ್ರಕ್ಕೆ ಕುಸಿದು ಬಿದ್ದಿತ್ತು. ಬಳಿಕ ಸರ್ಕಾರ ತಜ್ಞರ ಸಮಿತಿ ರಚಿಸಿ ವರದಿ ಪಡೆದುಕೊಂಡಿತ್ತು. ಮರುನಿರ್ವಾಣಕ್ಕೆ ಅನುಮತಿ ದೊರಕಿದ್ದರೂ ವಿನ್ಯಾಸ ಬದಲಾವಣೆ ಹಾಗೂ ಸಿಐಸಿಎಫ್ ವರದಿ ಅನುಸಾರ ಕಾಮಗಾರಿ ಕೈಗೊಳ್ಳುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಬಂದರ್‌ನಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಮೀನುಗಾರರ ಸಂಚಾರ ಹಾಗೂ ಬೋಟ್‌ಗಳ ನಿಲುಗಡೆಗೆ ಪ್ರಮುಖವಾದ ಜೆಟ್ಟಿ ದುರಸ್ತಿ ಇನ್ನೂ ನನೆಗುದಿಗೆ ಬಿದ್ದಿದ್ದು, ಮರುನಿರ್ಮಾಣ ಮಾಡುವಂತೆ ಮೀನುಗಾರರು ಆಗ್ರಹಿಸಿದ್ದಾರೆ.
ಗಂಗೊಳ್ಳಿ ಬಂದರಿನ ಅಭಿವೃದ್ಧಿ ಕಾಮಗಾರಿಗಳು ಮೀನುಗಾರರಲ್ಲಿ ನವ ಚೈತನ್ಯ ಮೂಡಿಸಿದೆ. ಬಂದರ್‌ನಲ್ಲಿ ಬೋಟ್ ನಿಲುಗಡೆಗೆ ಮತ್ತು ಮೀನು ಇಳಿಸಲು ಅನುಕೂಲವಾಗಲು ಜೆಟ್ಟಿ ಮರು ನಿರ್ಮಾಣ ಕಾರ್ಯ ಕೂಡಲೇ ಪೂರ್ಣಗೊಳಿಸಬೇಕು. ಕುಸಿದ ಜೆಟ್ಟಿಯ ದುರಸ್ತಿ ಕಾರ್ಯ ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕು.
— ರವಿಶಂಕರ ಖಾರ್ವಿ ಮೀನುಗಾರ ಮುಖಂಡರು, ಗಂಗೊಳ್ಳಿ
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಡಿ 5 ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಂದರಿನಲ್ಲಿ ಕುಸಿದ ಜೆಟ್ಟಿ ಮರು ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ.
— ಪ್ರಸನ್ನ, ಇಂಜಿನಿಯರ್, ಬಂದರು ಮತ್ತು ಮೀನುಗಾರಿಕೆ ಇಲಾಖೆ