ಉಪ್ಪಿನಂಗಡಿ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಕಡವಿನಬಾಗಿಲು ಮೊಹಮ್ಮದ್ ಝಿಯಾದ್(24)ನನ್ನು ಪೊಲೀಸರು ಗಾಂಜಾ ಸಹಿತ ಬಂಧಿಸಿದ್ದಾರೆ. ಬೆಳ್ತಂಗಡಿ ನ್ಯಾಯಾಲಯದ ವಾರಂಟ್ ಆದೇಶದನ್ವಯ ಆರೋಪಿಯನ್ನು ಬಂಧಿಸಲು ಹೋದಾಗ ಆತ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ವಿಚಾರಣೆಗೆ ಒಳಪಡಿಸಿದಾಗ ವಾರದ ಹಿಂದೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮಹಮ್ಮದ್ ನೌಶಾದ್ ಎಂಬಾತನಿಂದ 7500 ರೂ.ನ 15 ಗ್ರಾಂ ಗಾಂಜಾ ಖರೀದಿಸಿರುವುದಾಗಿ ತಿಳಿಸಿದ್ದು 10.33 ಗ್ರಾಂ ಗಾಂಜಾ ಪತ್ತೆಯಾಗಿದೆ. ಗಾಂಜಾ ಸಾಗಾಟ ಮತ್ತು ಮಾರಾಟ ಆರೋಪದಡಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಕುಡ್ತಪಳಿಕೆ ಎಂಬಲ್ಲಿನ ನಿವಾಸಿ ಲಕ್ಷ್ಮೀ ಕೆ.(47) ಎಂಬುವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬೆಡ್‌ರೂಮಿನ ಕಿಟಕಿಯ ಸರಳುಗಳಿಗೆ ಚೂಡಿದಾರದ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.