ಉಡುಪಿಯಲ್ಲಿ ಆಭರಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ 'ಆಭರಣ ಸುಂದರಿ' ಫ್ಯಾಷನ್ ಶೋವನ್ನು ಅಂಕಿತಾ ಅಮರ್ ಉದ್ಘಾಟಿಸಿದರು. ಸಂಧ್ಯಾ ಕಾಮತ್, ಸುಭಾಷ್ ಕಾಮತ್, ಮಹೇಶ್ ಕಾಮತ್, ವೀಣಾ ಕಾಮತ್, ಶ್ಲೋಕಾ ಕಾಮತ್, ಮಹಾಲಸಾ, ಮೀನಾ ಅಡ್ಯಂತಾಯ, ಅಶ್ವಿತಾ ಇದ್ದರು.
* ನಟಿ, ಕಲಾವಿದೆ ಅಂಕಿತಾ ಅಮರ್ ಅಭಿಮತ
* ಆಭರಣ ಸಂಸ್ಥೆಯ 'ಆಭರಣ ಸುಂದರಿ' ಫ್ಯಾಷನ್ ಶೋ ಉದ್ಘಾಟನೆ
ಉಡುಪಿ: ಆಭರಣಗಳಲ್ಲಿ ಇರುವ ಡಿಸೈನ್ಗಳಂತೆ ಮಹಿಳೆಯರ ಜೀವನವೂ ಸಹ ಒಂದೊಂದು ರೀತಿಯಲ್ಲಿ ಡಿಸೈನ್ ಆಗಿದೆ. ನವದುರ್ಗೆಯರ ಪ್ರಕಾರದಲ್ಲೇ ಹೆಣ್ಣಿನ ಜೀವನ ಸಾಗುತ್ತದೆ. ಆಭರಣವೆಂದರೆ ಮಹಿಳೆಯರಿಗೆ ಅಚ್ಚುಮೆಚ್ಚು. ಅದರಿಂದ ದೇಹದಲ್ಲಿ ಚೈತನ್ಯ, ಹೆಣ್ಣಿನ ಅನೇಕ ಭಾವನೆಗಳಿಗೆ ಆಸರೆಯಾಗುತ್ತದೆ. ಆಭರಣವೆಂದರೆ ಕೇವಲ ಅಲಂಕಾರವಲ್ಲ. ಅದು ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತೀಕ ಎಂದು ನಟಿ, ಕಲಾವಿದೆ ಅಂಕಿತಾ ಅಮರ್ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ 'ಆಭರಣ' ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚಣೆ ನಿಮಿತ್ತ ಉಡುಪಿಯ ಹೋಟೆಲ್ ಮಣಿಪಾಲ್ ಇನ್ ಸಭಾಂಗಣದಲ್ಲಿ ಶನಿವಾರ (ಮಾ.7) ರಾತ್ರಿ ಆಯೋಜಿಸಿದ್ದ 'ಆಭರಣ ಸುಂದರಿ' ಫ್ಯಾಶನ್ ಶೋ ಕಾರ್ಯಕ್ರಮ ಉದ್ಘಾಟಿಸಿ, 'ಗೋವಿಂದ ಜಯ ಜಯ ಗೋಪಾಲ ಜಯ ಜಯ' ಸಂಗೀತದ ಹಿನ್ನೆಲೆಯಲ್ಲಿ ರ್ಯಾಂಪ್ ವಾಕ್ ಮಾಡಿ ಫ್ಯಾಷನ್ ಶೋಗೆ ಚಾಲನೆ ನೀಡಿ ಮಾತನಾಡಿದರು. 'ನಮ್ಮಿಂದ ನೀವು, ನಿಮ್ಮಿಂದ ನಾವು' ಎನ್ನುವುದೇ ಮಹಿಳಾ ದಿನಾಚರಣೆಯ ಘೋಷಣೆಯಾಗಲಿ ಎಂದರು.
ಸಮನ್ವಯದ ಬದುಕು ಸುಂದರ
ಆಭರಣ ಸಂಸ್ಥೆಯ ಸಂಧ್ಯಾ ಕಾಮತ್ ಮಾತನಾಡಿ, ಇಲ್ಲಿ ಸೇರಿರುವವರೆಲ್ಲರೂ ನಮ್ಮ ಒಡನಾಡಿಗಳಷ್ಟೇ ಅಲ್ಲ. ಒಡಹುಟ್ಟಿದವರು. ಅಕ್ಕರೆಯ ಒಡವೆಗಳಂತೆ ಪ್ರೀತಿಪಾತ್ರರು. ಒಡವೆ, ಉಡುಗೆ, ತೊಡುಗೆಯಿಂದ ಬದುಕು ಸಂತಸ. ಅವುಗಳ ಸಮನ್ವಯದ ನಡಿಗೆ, 'ಮೌನವೇ ಆಭರಣ, ಮುಗುಳ್ನಗೆಯೇ ಶಶಿಕಿರಣ' ಎಂಬ ಹಾಡಿನ ತದ್ರೂಪವೇ ಇಂದಿನ 'ಆಭರಣ ಸುಂದರಿ' ಫ್ಯಾಷನ್ ಶೋ ಆಗಿದೆ ಎಂದರು.
ವೇದಿಕೆಯಲ್ಲಿ ಆಭರಣ ಸಂಸ್ಥೆಯ ಸುಭಾಷ್ ಕಾಮತ್, ಮಹೇಶ್ ಕಾಮತ್, ವೀಣಾ ಕಾಮತ್, ಶ್ಲೋಕಾ ಕಾಮತ್, ಮಹಾಲಸಾ, ಮೀನಾ ಅಡ್ಯಂತಾಯ, ಅಶ್ವಿತಾ ಶೆಟ್ಟಿ ಉಪಸ್ಥಿತರಿದ್ದರು.
ಶಾಸಕ ಯಶ್ಪಾಲ್ ಸುವರ್ಣ, ಎಸ್ಪಿ ಹರಿರಾಂ ಶಂಕರ್, ಜಿಪಂ ಸಿಇಒ ಪ್ರತೀಕ್ ಬಾಯಲ್, ಉದ್ಯಮಿಗಳಾದ ಪುರುಷೋತ್ತಮ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದೇವಿಪ್ರಸಾದ್ ಶೆಟ್ಟಿ, ಅಶೋಕ್ ಗಾಯತ್ರಿ ಪೈ, ಡಾ.ಕಿರಣ್ ಆಚಾರ್ಯ, ಶಾಲಿನಿ ಜಿ. ಶಂಕರ್, ಡಾ.ರೋಷನ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಖ್ಯಾತ ನಿರೂಪಕಿ ಶಮೀರಾ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿದರು.
ಸಂಗೀತದ ತಾಳಕ್ಕೆ ಬೆಡಗಿಯರ ಬಳಕುವ ಹೆಜ್ಜೆ
ಖ್ಯಾತ ಗಾಯಕಿ ಕಾವ್ಯಾ ಅಜಿತ್ ಹಾಗೂ ಪ್ರೀಶಿಯಸ್ ಪೀಟರ್ ಅವರ ವಾದ್ಯಗಳ ಸಂಗೀತದ ತಾಳಕ್ಕೆ ಹಲವಾರು ಬೆಡಗಿಯರು ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ತೊಡುಗೆ, ಆಭರಣ ಧರಿಸಿ ಕಂಗೊಳಿಸಿದರು. ವಿವಿಧ ವಿನ್ಯಾಸದ ಬಟ್ಟೆ-ಬರೆ ಸೀರೆ ತೊಟ್ಟಿದ್ದ ಚೆಲುವೆಯರೊಂದಿಗೆ ಆಭರಣ ಸಂಸ್ಥೆಯ ಸಂಧ್ಯಾ ಕಾಮತ್ ಕೂಡ ಹೆಜ್ಜೆ ಹಾಕಿದರು. ಬೆಂಗಳೂರಿನ ಮಾಡೆಲ್ಸ್ಗಳು ಚಿನ್ನ-ವಜ್ರಾಭರಣ ಧರಿಸಿ ನಸು ನಗುತ್ತ, ಸೊಂಟ ಬಳುಕಿಸುತ್ತ ಹೆಜ್ಜೆ ಹಾಕಿದರು. ಆಯ್ದ 17 ಗ್ರಾಹಕ ಮಹಿಳೆಯರು ಉಡುಪಿ ಸೀರೆ, ಶಂಕರಪುರ ಮಲ್ಲಿಗೆ ತೊಟ್ಟು ಬೆಳ್ಳಿ ಆಭರಣ ಧರಿಸಿ ರ್ಯಾಂಪ್ ವಾಕ್ ಮಾಡಿ ಗಮನ ಸೆಳೆದರು.