ಮೂಲ್ಕಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಸಮೀಪ ಚೌಡೇನಹಳ್ಳಿ ಎಂಬಲ್ಲಿ ಭೀಕರ ಕಾರು ಅಪಘಾತದಲ್ಲಿ ಮೂಲ್ಕಿ ನಿವಾಸಿ ಯುವತಿ ಮೃತಪಟ್ಟರೆ ಕಾರಿನಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ನಾಡ್ ಕೆ.ಎಸ್ ರಾವ್ ನಗರ ಕೊರಂಟಬೆಟ್ಟು ನಿವಾಸಿ, ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ದಿ.ಶಶಿಕಾಂತ್ ಶೆಟ್ಟಿ ಸಹೋದರಿ ಶಶಿಪ್ರಭಾ(47) ಮೃತಪಟ್ಟವರು. ಗಾಯಾಳುಗಳಾದ ಕಾರ್ಕಳ ನಿವಾಸಿ ದಿನೇಶ್(34), ಮಂಡ್ಯ ನಿವಾಸಿ ಸುಜನ್(20) ಹಾಗೂ ಕಾರು ಚಾಲಕ ಅಖಿಲ್ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಪ್ರಭಾ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಕ್ರಾಸ್ ಬಳಿ ಹೋಟೆಲ್ ಡಾಬಾ ನಡೆಸುತ್ತಿದ್ದು, ಭಾನುವಾರ ರಾತ್ರಿ ಹೊತ್ತು ಕಾರಿನಲ್ಲಿ ಮೂಲ್ಕಿಗೆ ಬರುತ್ತಿರುವಾಗ ರಾತ್ರಿ 1.10 ಸುಮಾರಿಗೆ ಚೌಡೇನಹಳ್ಳಿ ಬಳಿ ರಸ್ತೆಯಲ್ಲಿ ಹಂದಿ ಮೃತಪಟ್ಟಿದ್ದನ್ನ ಗಮನಿಸಿ ಚಾಲಕ ಅಖಿಲ್ ಕಾರನ್ನು ನಿಧಾನ ಮಾಡಿ ಬದಿಗೆ ಸರಿದಿದ್ದರು. ಈ ಸಂದರ್ಭ ಹಿಂದುಗಡೆಯಿಂದ ಬರುತ್ತಿದ್ದ ಕಾರು ಅದರ ಚಾಲಕ ಅತಿವೇಗದಿಂದ ಹಂದಿಯ ಮೇಲೆ ಕಾರು ಹತ್ತಿಸಿದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಶಶಿಪ್ರಭಾರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ
ಅಪಘಾತದ ರಭಸಕ್ಕೆ ಶಶಿಪ್ರಭಾ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಕಾರಿನ ಹಿಂಭಾಗದಲ್ಲಿದ್ದ ಶಶಿಪ್ರಭಾ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಉಳಿದಂತೆ ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಲ್ಲಿ ಮೃತ ಶಶಿಪ್ರಭಾ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಚೆನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.