ಕಣ್ಣೂರು ಸಮೀಪ ನದಿ ಬದಿ ರೆಫ್ರಿಜರೇಟರ್ ತ್ಯಾಜ್ಯದಿಂದ ಹೊಗೆ ಬರುತ್ತಿರುವುದು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಡ್ಯಾರ್- ಕಣ್ಣೂರು ಮಧ್ಯಭಾಗದಲ್ಲಿರುವ ನದಿ ದಂಡೆಯ ಖಾಲಿ ಜಾಗವು ಇದೀಗ ‘ತ್ಯಾಜ್ಯದ ತೊಟ್ಟಿ’ಯಾಗಿ ಮಾರ್ಪಟ್ಟಿದೆ. ಗುಜರಿ ಅಂಗಡಿಗಳಿಂದ ತರಲಾದ ಟನ್‌ಗಟ್ಟಲೆ ರೆಫ್ರಿಜರೇಟರ್ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದ್ದು, ಇದಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಪರಿಸರ ಮಾಲಿನ್ಯದ ಜತೆಗೆ ಸ್ಥಳೀಯರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡಿವೆ.
‘ನರಕ ಸದೃಶ’ ದೃಶ್ಯಾವಳಿ
ನದಿ ತೀರದ ಈ ಪ್ರದೇಶದಲ್ಲಿ ರೆಫ್ರಿಜರೇಟರ್‌ಗಳ ಭಗ್ನಾವಶೇಷಗಳ ಗುಡ್ಡವೇ ನಿರ್ಮಾಣವಾಗಿದೆ. ರಾಶಿ ಹಾಕಲಾದ ತ್ಯಾಜ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಿದ್ದು, ಭಾರಿ ಮಳೆಯ ನಡುವೆಯೂ ಈ ತ್ಯಾಜ್ಯದ ರಾಶಿಯಿಂದ ದಟ್ಟವಾದ ಹೊಗೆಯುಗುಳುತ್ತಲೇ ಇದೆ. ಇದರಿಂದಾಗಿ ಸ್ಥಳೀಯ ಪಕ್ಷಿಗಳು ವಲಸೆ ಹೋಗುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡತೊಡಗಿವೆ.
ಅಧಿಕಾರಿಗಳ ಬೇಜವಾಬ್ದಾರಿ
ಈ ಬಗ್ಗೆ ಪರಿಸರ ಇಲಾಖೆಯ ಹಿರಿಯ ಅಧಿಕಾರಿ ಮಂಜು ಅವರನ್ನು ಸಂಪರ್ಕಿಸಿದಾಗ, ಅವರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ನನಗಿದು ಬರೋದಿಲ್ಲ, ದೂರು ಬರೆದುಕೊಡಿ. ಈ ಪ್ರದೇಶ ಪಾಲಿಕೆ ವ್ಯಾಪ್ತಿಯೋ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯೋ ಎಂಬುದು ನನಗೆ ಗೊತ್ತಿಲ್ಲ, ಕ್ರಮ ಕೈಗೊಳ್ಳುವುದು ಅವರ ಕೆಲಸ ಎಂದು ಹೇಳುವ ಮೂಲಕ ಕಚೇರಿ ಕಡತಗಳಿಗೆ ಸೀಮಿತವಾಗಿದ್ದಾರೆ.
ಬೆಂಕಿ ಹಚ್ಚುವುದು ಅಪರಾಧ
ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುವುದು ಮತ್ತು ಅದಕ್ಕೆ ಬೆಂಕಿ ಹಚ್ಚುವುದು ಗಂಭೀರ ಅಪರಾಧ. ಇಂತಹ ಕೃತ್ಯಕ್ಕೆ ಭಾರಿ ದಂಡದ ಜತೆಗೆ ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ, ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ.
ಕಳೆದ ಹಲವು ಸಮಯಗಳಿಂದ ಈ ಭಾಗದಲ್ಲಿ ರೆಫ್ರಿಜರೇಟರ್ ಗುಜರಿ ವಸ್ತುಗಳನ್ನು ಸುಡುತ್ತಿರುವುದರಿಂದ ನಿರಂತರವಾಗಿ ಹೊಗೆ ಬರುತ್ತಿದೆ. ಹೆದ್ದಾರಿಯ ಪಕ್ಕದಲ್ಲೇ ಪರಿಸರ ಹಾಳಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸರಿಯಲ್ಲ.
ದ.ಕ. ಜಿಲ್ಲೆಯಲ್ಲಿ 21 ವರ್ಷಗಳಿಂದ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಸುಪ್ರೀಂಕೋರ್ಟ್ ಆದೇಶವಿದ್ದರೂ ಎಲ್ಲೆಡೆ ರಾಜಾರೋಷವಾಗಿ ಕಸ ಸುಡುವ ಕೆಲಸ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಠಿಣ ಕ್ರಮ ಜರುಗಿಸಬೇಕು.