ಬಡಗಬೆಳ್ಳೂರು ಗ್ರಾಮದ ವರಟೀಲು ನಿವಾಸಿ ಲಕ್ಷ್ಮೀ ಅವರ ಕುಟುಂಬಕ್ಕೆ ಜೆಸಿಐ ನಿರ್ಮಿಸಿಕೊಟ್ಟಿರುವ ನೂತನ ಮನೆ.
ಕಳೆದ ನಾಲ್ಕು ವರ್ಷಗಳಿಂದ ಟರ್ಪಾಲು ಹಾಸಿದ ಜೋಪಡಿಯಲ್ಲಿ ವಾಸಿಸುತ್ತಿದ್ದ ಬಡಗಬೆಳ್ಳೂರು ಗ್ರಾಮದ ವರಟೀಲು ನಿವಾಸಿ, ಆದಿದ್ರಾವಿಡ ಸವಾಜದ ಲಕ್ಷ್ಮೀ ಅವರ ಬಡ ಕುಟುಂಬಕ್ಕೆ ಜೆಸಿಐ ಬಂಟ್ವಾಳ ಘಟಕ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿಕೊಟ್ಟಿದ್ದು ಆಸರೆಯಾಗಿದೆ. ಭಾನುವಾರ ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್.ಆಚಾರ್ಯ ಅವರ ಭೇಟಿ ಸಂದರ್ಭ ಕುಟುಂಬಕ್ಕೆ ಮನೆ ಹಸ್ತಾಂತರ ಮಾಡಲಾಗುವುದು.
ನಾಲ್ಕು ವರ್ಷಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆಗೆ ಲಕ್ಷ್ಮೀ ಅವರ ಕುಟುಂಬ ವಾಸವಿದ್ದ ಮುರುಕಲು ಮನೆ ಕುಸಿದು ಬಿದ್ದಿತ್ತು. ಈ ಸಂದರ್ಭ ಹೊಸ ಮನೆ ನಿರ್ವಾಣಕ್ಕೆ ಸರ್ಕಾರದ ವಸತಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿದ್ದರು. ಮನೆ ನಿರ್ಮಾಣಗೊಳ್ಳಬೇಕಿದ್ದ ನಿವೇಶನದಲ್ಲಿ ದೋಷ ಇದೆ ಎಂಬ ಕಾರಣಕ್ಕೆ ಕೆಲವು ದಿನಗಳ ಬಳಿಕ ಪರಿಹಾರ ಕಾರ್ಯವನ್ನೂ ನೆರವೇರಿಸಲಾಗಿತ್ತು. ಗುದ್ದಲಿಪೂಜೆ ನೆರವೇರಿಸಿ ಅನುದಾನಕ್ಕಾಗಿ ಪಂಚಾಯಿತಿಗೆ ತೆರಳಿ ವಿಚಾರಿಸಿದಾಗ ಮಂಜೂರಾದ ಹಣ ವಾಪಸ್ ಹೋಗಿತ್ತು.
ದಿಕ್ಕು ತೋಚದಂತಾದ ಲಕ್ಷ್ಮೀ ಅವರ ಕುಟುಂಬ ನಿವೇಶನದ ಪಕ್ಕದಲ್ಲಿ ಸ್ಥಳೀಯರ ಜಮೀನಿನಲ್ಲಿ ಟರ್ಪಾಲು ಹಾಸಿದ ಜೋಪಡಿ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ವೃದ್ಧ ತಂದೆ ತಾಯಿ, ಶಿಕ್ಷಣ ಪಡೆಯುತ್ತಿರುವ ಇಬ್ಬರು ಮಕ್ಕಳು ಸಹಿತ ಐವರು ಈ ಗುಡಿಸಲಿನಲ್ಲಿ ಬದುಕು ಸಾಗಿಸುತ್ತಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಅವರೇ ಮನೆಗೆ ಆಧಾರ ಸ್ತಂಭವಾಗಿದ್ದು, ಜೀವನ ನಿರ್ವಹಣೆಯೇ ಕಷ್ಟಸಾಧ್ಯವಾಗಿದ್ದರಿಂದ ಮನೆ ನಿರ್ಮಾಣ ಅವರ ಕನಸಿನ ಮಾತಾಗಿತ್ತು.
ಆಪತ್ಕಾಲದಲ್ಲಿ ನೆರವಾದರು
ಲಕ್ಷ್ಮೀ ಅವರ ಕುಟುಂಬ ಡೇರೆ ಹಾಕಿಕೊಂಡು ಬದುಕುತ್ತಿರುವ ದಯನೀಯ ಸ್ಥಿತಿಯ ಬಗ್ಗೆ ಅರಿತ ಜೆಸಿಐ ಬಂಟ್ವಾಳದ ಸದಸ್ಯರು ಮನೆಗೆ ಭೇಟಿ ನೀಡಿದಾಗ ವಾಸ್ತವ ಸ್ಥಿತಿ ತಿಳಿದು ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದಿದ್ರಾವಿಡ ಸಮಾಜ ಸೇವಾ ಸಂಘದ ದ.ಕ. ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಮನೆ ನಿರ್ಮಾಣ ಕಾರ್ಯಕ್ಕೆ ಮುಂದಡಿಯಿಟ್ಟರು. ಒಂದಷ್ಟು ಕಾರ್ಯಗಳನ್ನು ಶ್ರಮದಾನದ ಮೂಲಕ ನೆರವೇರಿಸಲಾಯಿತು. ಲಕ್ಷ್ಮೀ ಮನೆಕೆಲಸ ಮಾಡುವ ಮನೆಯ ಮಾಲೀಕರು ಸ್ಲಾೃಬ್‌ನ ಖರ್ಚು ಭರಿಸಿದರೆ, ಆದಿದ್ರಾವಿಡ ಸಮಾಜ ಸೇವಾ ಸಂಘವು ಸಿಮೆಂಟ್ ಹಾಗೂ ಪಂಚಾಗದ ಕಾರ್ಮಿಕರ ವೇತನ ನೀಡಿತು. ಉಳಿದ ಮೊತ್ತವನ್ನು ಜೆಸಿಐ ಬಂಟ್ವಾಳ ಭರಿಸಿದೆ. ಒಂದು ವರ್ಷದ ಅವಧಿಯೊಳಗೆ ಸುಂದರವಾದ ಮನೆ ನಿರ್ಮಿಸಿಕೊಟ್ಟು ಲಕ್ಷ್ಮೀ ಅವರ ಕುಟುಂಬದ ಮೊಗದಲ್ಲಿ ನೆಮ್ಮದಿಯ ಮಂದಹಾಸ ಮೂಡಿಸಿದೆ.
ಲಕ್ಷ್ಮೀ ಅವರ ಕುಟುಂಬ 4 ವರ್ಷಗಳಿಂದ ಜೋಪಡಿಯಲ್ಲಿ ಬದುಕುತ್ತಿತ್ತು. ಅವರ ಕುಟುಂಬದ ಸ್ಥಿತಿ ಗಮನಿಸಿದ ಬಳಿಕ ಜೆಸಿಐ ಬಂಟ್ವಾಳದ ಸದಸ್ಯರು ಹಾಗೂ ದ.ಕ. ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಸಹಕಾರದಲ್ಲಿ ಮನೆ ನಿರ್ಮಿಸಲಾಗಿದೆ. ಗಾಳಿ- ಮಳೆಯೆಂಬ ಗೊಡವೆಯಿಲ್ಲದ ಡೇರೆಯಲ್ಲಿ ಜೀವಿಸುತ್ತಿದ್ದ ಬಡ ಕುಟುಂಬವೊಂದು ಇನ್ನು ಮುಂದೆ ಸ್ವಂತ ಮನೆಯಲ್ಲಿ ವಾಸ ಮಾಡುತ್ತಾರೆ. ಇದೊಂದು ಪುಣ್ಯದ ಕಾರ್ಯವೆಂಬ ಖುಷಿ ಇದೆ.
— ಕಿಶೋರ್ ಕುಮಾರ್ ಆಚಾರ್ಯ, ಜೆಸಿಐ ಬಂಟ್ವಾಳ ಅಧ್ಯಕ್ಷ