ಉಡುಪಿ

ಅಮಿತ ಬಲಯುತ ದೇವತಾತ್ಮಕ ಸುವಸ್ತು

ಅಮಿತವಾದ ಶಕ್ತಿಯುಳ್ಳ ತುಪ್ಪಕ್ಕೆ ಸಮನಾದ ಸಂಪತ್ತು ಇನ್ನೊಂದು ಸೃಷ್ಟಿಯಲ್ಲಿ ಇಲ್ಲ. ಘೃತ ಅಥವಾ ತುಪ್ಪ ಕೇವಲ ಭೌತಿಕ ದ್ರವ ಅಲ್ಲ. ಬೆಲೆ ಕಟ್ಟಲಾಗದ ಅಮೂಲ್ಯವಾದ ತುಪ್ಪ ಸಾಕ್ಷಾತ್ ದೇವತಾ ಸ್ವರೂಪವಾಗಿ ದೇವತಾತ್ಮಕ ಎನಿಸಿಕೊಂಡಿದೆ.

ಗೋಕರ್ಣ: ಘೃತ ಅಥವಾ ತುಪ್ಪ ಕೇವಲ ಭೌತಿಕ ದ್ರವ ಅಲ್ಲ. ಬೆಲೆ ಕಟ್ಟಲಾಗದ ಅಮೂಲ್ಯವಾದ ತುಪ್ಪ ಸಾಕ್ಷಾತ್ ದೇವತಾ ಸ್ವರೂಪವಾಗಿ ದೇವತಾತ್ಮಕ ಎನಿಸಿಕೊಂಡಿದೆ.

ಅಮಿತವಾದ ಶಕ್ತಿಯುಳ್ಳ ತುಪ್ಪಕ್ಕೆ ಸಮನಾದ ಸಂಪತ್ತು ಇನ್ನೊಂದು ಸೃಷ್ಟಿಯಲ್ಲಿ ಇಲ್ಲ ಎಂದು ಅನ್ನಬ್ರಹ್ಮ ಚಾತುರ್ಮಾಸ್ಯ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಇಲ್ಲಿನ ಅಶೋಕೆಯಲ್ಲಿ ಬುಧವಾರದ ಧರ್ಮಸಭೆಯಲ್ಲಿ ಶ್ರೀಗಳು ಸ್ನೇಹಾತ್ಮಕವಾದ ಜಿಡ್ಡುಳ್ಳ ಪದಾರ್ಥಗಳಲ್ಲಿ ತುಪ್ಪದ ಶ್ರೇಷ್ಠತೆಯನ್ನು ವರ್ಣಿಸಿದರು.

ಸ್ನೇಹೋತ್ತಮ ಘೃತ: ಅಂದರೆ ಜೋಡಿಸುವ ಶಕ್ತಿಯಿರುವ ಜಿಡ್ಡುಳ್ಳ ಸಾತ್ವಿಕ ಪದಾರ್ಥಗಳಲ್ಲಿ ತುಪ್ಪಕ್ಕೆ ಸರ್ವ ಸ್ನೇಹೋತ್ತಮ ಎಂದು ಚರಕ ಮಹರ್ಷಿಗಳು ಶ್ರೇಷ್ಠ ಸ್ಥಾನವನ್ನಿತ್ತಿದ್ದಾರೆ.

ಜಿಡ್ಡುಳ್ಳ ಪದಾರ್ಥಗಳನ್ನು ಆಯುರ್ವೇದ ನಾಲ್ಕು ವಿಧವಾಗಿ ವಿಭಾಗಿಸಿದೆ. ಈ ಪೈಕಿ ಎರಡು ಸಾತ್ವಿಕ ಮತ್ತು ಇನ್ನೆರಡು ಸಾತ್ವಿಕ ಅಲ್ಲದ್ದು. ಇವುಗಳು ಸರ್ಪಿ ಅರ್ಥಾತ್ ತುಪ್ಪ, ತೈಲಂ-ಎಳ್ಳಿನಿಂದ ಮಾಡಿದ ಎಳ್ಳೆಣ್ಣೆ, ವಸಾ-ಕೊಬ್ಬು ಮತ್ತು ಕೊನೆಯದು ಮಜ್ಜಾ ಅಂದರೆ ಮೂಳೆಯ ತಿರುಳು. ಏಷುಚೈವ ಉತ್ತಮಂ ಸರ್ಪೀಃ. ಈ ನಾಲ್ಕರಲ್ಲಿ ಸರ್ಪಿ ಅಂದರೆ ತುಪ್ಪವೇ ಸರ್ವೋತ್ತಮ ಎಂದು ವರ್ಣಿಸಲಾಗಿದೆ ಎಂದು ಶ್ರೀಗಳು ವಿವರಿಸಿದರು.

ತುಪ್ಪವನ್ನು ಯೋಗವಾಹಿ ಎನ್ನಲಾಗಿದೆ. ತುಪ್ಪದಲ್ಲಿ ಗುಣಗ್ರಾಹಿತ್ವ ಉಳಿದೆಲ್ಲ ಜಿಡ್ಡುಮಯ ಪದಾರ್ಥಗಳಿಗಿಂತ ಅತ್ಯಧಿಕವಾಗಿದೆ ಎಂದು ವಿವರಿಸಿದ ಶ್ರೀಗಳು ಘೃತ ಕುಟುಂಬದ 16 ಸದಸ್ಯರುಗಳಾದ ಕ್ಷೀರ, ದಧಿ,ದಧಿ ಮಂಡಲ(ಮೊಸರು ಮೇಲಿನ ಹಳದಿ ದ್ರವ), ಸಂತಾನಿಕಾ (ಕೆನೆ), ತಕ್ರ(ಮಜ್ಜಿಗೆ), ಘೋಲ(ದಪ್ಪ ಮಜ್ಜಿಗೆ),ನವನೀತ-ಬೆಣ್ಣೆ, ಕಿಲಾಟ-ಪನೀರ್, ಮೋರಟ-ಗಿಣ್ಣ, ಕ್ಷೀರವಟಿಕಾ-ಖೋವಾ ಇತ್ಯಾದಿಗಳನ್ನು ಸಂಕ್ಷಿಪ್ತದಲ್ಲಿ ಪರಿಚಯಿಸಿದರು.

ನೂರಕ್ಕೆ ಮಹಾಘೃತ: ಈ ಕ್ಷೀರ ಸಾಮ್ರಾಜ್ಯಕ್ಕೆ ಘೃತವೇ ಚಕ್ರವರ್ತಿ. ಇದಕ್ಕೆ ತುಪ್ಪ ಪಡೆದಿರುವ ಅನಂತಾನಂತ ಆಯುಷ್ಯ ಕಾರಣ. ಕ್ಷೀರ ಸಂತಾನದ ಹಾಲು. ಮೊಸರು, ಬೆಣ್ಣೆ, ಇತ್ಯಾದಿಗಳೆಲ್ಲವೂ ಸೀಮಿತ ಆಯುಷ್ಯ ಉಳ್ಳವುಗಳಾಗಿವೆ. ಆದರೆ ಘೃತ ಮಾತ್ರ ತನ್ನ ಆಯುಷ್ಯ ವರ್ಧನೆಯೊಂದಿಗೆ ಗುಣವನ್ನೂ ಹೆಚ್ಚಿಸಿಕೊಳ್ಳುತ್ತ ಅಮಿತ ವರ್ಷ ಬಾಳುವ ಶಕ್ತಿ ಪಡೆದಿದೆ. ಹೀಗಾಗಿ 10 ವರ್ಷ ಕಳೆದರೆ ಘೃತ ಪ್ರಪುರಾಣ ಎನಿಸಿಕೊಂಡು ಶತಮಾನಾಧಿಕ ಆಯುಷ್ಯದ ತುಪ್ಪ ಮಹಾಘೃತ ಎನ್ನುವ ವಿಶೇಷ ಅಭಿಧಾನಕ್ಕೆ ಭಾಜನವಾಗುತ್ತದೆ ಎಂದರು.

ಬುಧವಾರ ನಾಡವ ಸಮಾಜದಿಂದ ಸಮರ್ಪಿತ ಸ್ವರ್ಣಪಾದುಕಾ ಪೂಜೆಯಲ್ಲಿ ಸಮಾಜ ಪ್ರಮುಖರಾದ ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ,ಹಿರಿಯರಾದ ಬೀರಣ್ಣ ಮಾಸ್ತರ್ ಅಡಿಗೋಣ, ವೆಂಕಟ್ರಮಣ ಕವರಿ, ರಾಮು ಕೆಂಚನ್ ಮತ್ತಿತರರು ಭಾಗಿಗಳಾಗಿ ಶ್ರೀಗಳ ಆಶೀರ್ವಾದ ಪಡೆದರು.

ಹಳ್ಳೇರ ಸಮಾಜದವರು ಸ್ವರ್ಣಪಾದುಕಾ ಪೂಜೆ ಕೈಗೊಂಡು ಶ್ರೀಗಳಿಂದ ಆಶೀರ್ವಾದ ಪಡೆದರು. ವಿಷ್ಣು ಸಭಾಹಿತ ಉಡುಪಿ ಕುಟುಂಬದವರು ಶ್ರೀಗುರುಭಿಕ್ಷಾಸೇವೆ ಸಲ್ಲಿಸಿದರು.

ಧರ್ಮಸಭೆಯಲ್ಲಿ ಸವದತ್ತಿಯ ಶ್ರೀ ಶಿವಾನಂದ ಸ್ವಾಮೀಜಿ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪಟು ಅರವಿಂದ ಭಟ್ಟ, ಉದ್ಯಮಿ ಮಧುಕರ ನರಸಿಂಹ ಹೆಗಡೆ, ವಕೀಲ ಗಣಪತಿ ಹೆಗಡೆ ದುವಾ, ಸರಸ್ವತಿ ಜಯರಾಮ ಕೂರ್ಸೆ ಮತ್ತು ದಿನಪ್ರಧಾನರಾಗಿ ಶಿವರಾಮ ಭಟ್ಟ ಪೊನ್ನೂರುಕಜೆ ದಂಪತಿ ಶ್ರೀಗಳಿಂದ ಆಶೀರ್ವಾದ ಪಡೆದರು.