ಉಡುಪಿ: ಜೇಬಿನಲ್ಲಿ ದುಡ್ಡಿಲ್ಲ. ಆದರೂ ಭಾರತೀಯ ಸಂಸ್ಕೃತಿ ಮತ್ತು ವೈವಿಧ್ಯತೆ ತಿಳಿಯುವ ಅದಮ್ಯ ಹಂಬಲದೊಂದಿಗೆ ಉತ್ತರ ಪ್ರದೇಶದ ಲಕ್ನೋ ಮೂಲದ ಸಾಹಸಿ ಯುವಕ ಆಕಾಶ್ ಶುಕ್ಲಾ ಕೈಗೊಂಡಿರುವ ಅಖಿಲ ಭಾರತ ಪಾದಯಾತ್ರೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಬೆನ್ನ ಮೇಲೆ ಹೆಮ್ಮೆಯ ಭಾರತದ ತ್ರಿವರ್ಣ ಧ್ವಜ ಹಾಗೂ ಕೈಯಲ್ಲಿ ಯಾತ್ರೆಯ ಬ್ಯಾನರ್ ಹಿಡಿದು ಹೊರಟಿರುವ ಆಕಾಶ್, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಎಲ್ಲಾ 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕೇವಲ ಕಾಲ್ನಡಿಗೆಯಲ್ಲೇ ಕ್ರಮಿಸುವ ಬೃಹತ್ ಸಂಕಲ್ಪ ಮಾಡಿದ್ದಾರೆ. ಈಗಾಗಲೇ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳನ್ನು ಯಶಸ್ವಿಯಾಗಿ ದಾಟಿರುವ ಇವರು, ಇದೀಗ ಕರಾವಳಿಗೆ ಆಗಮಿಸಿದ್ದಾರೆ.
ಮಾರ್ಗಮಧ್ಯೆ ಜನರ ಪ್ರೀತಿಯೇ ಆಸರೆ
ಕಳೆದ 9 ತಿಂಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ಹೆಜ್ಜೆಯಿಡುತ್ತಿರುವ ಇವರಿಗೆ ಯಾವುದೇ ಹೋಟೆಲ್ ಅಥವಾ ಐಷಾರಾಮಿ ವ್ಯವಸ್ಥೆಗಳಿಲ್ಲ. ಹೋದಲ್ಲೆಲ್ಲ ಸಿಗುವ ಸ್ಥಳಿಯ ಜನರ ಪ್ರೀತಿ, ಹಾಗೂ ದಾರಿಯುದ್ದಕ್ಕೂ ಸಿಗುವ ಪವಿತ್ರ ದೇವಸ್ಥಾನಗಳೇ ವಸತಿ ಹಾಗೂ -ಊಟಕ್ಕೆ ಆಸರೆಯಾಗಿವೆ.
ಉಡುಪಿ ಶ್ರೀಕೃಷ್ಣನ ದರ್ಶನ
ಪಾದಯಾತ್ರೆಯ ಭಾಗವಾಗಿ ಸಾಂಸ್ಕೃತಿಕ ನಗರಿ ಉಡುಪಿಗೆ ಆಗಮಿಸಿದ ಆಕಾಶ್ ಶುಕ್ಲಾ, ವಿಶ್ವಪ್ರಸಿದ್ಧ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸಿದ್ದಾರೆ. ಯಾವುದೇ ಪ್ರಚಾರದ ಹಪಹಪಿತನವಿಲ್ಲದೆ ಹೆಜ್ಜೆಯಿಡುತ್ತಿರುವ ಇವರ ಈ ಸಾಹಸಗಾಥೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ನ ಆಕಾಶ್ ಶುಕ್ಲ ಪೈಡಲ್ ಯಾತ್ರಾ ಖಾತೆಗಳ ಮೂಲಕ ಲಕ್ಷಾಂತರ ವೀಕ್ಷಕರು ಪ್ರವಾಸದ ಅನುಭವಗಳನ್ನು ವೀಕ್ಷಿಸಿದ್ದಾರೆ.