ಉಡುಪಿ: ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ವಾರ್ಥ ದುಡಿಮೆ ಮತ್ತು ವಿಶ್ವಾಸಾರ್ಹತೆಯು ಸಮಾಜದಲ್ಲಿ ಬಹುದೊಡ್ಡ ದೊಡ್ಡ ಸಾಧನೆಗೆ ಕಾರಣವಾಗಿದೆ. ಅವರ ಸಾಮಾಜಿಕ ಕಳಕಳಿ ಅನುಕರಣೀಯ. ಡಾ. ಸುದರ್ಶನ ಮೂರ್ತಿ ದಂಪತಿ ಉನ್ನತ ಸ್ಥಾನದಲ್ಲಿದ್ದರೂ ದೈವ ಭಕ್ತಿ, ಸಾಮಾಜಿಕ ಪ್ರೀತಿಯು ಅವರಲ್ಲಿರುವ ಉನ್ನತ ಗುಣ ವ್ಯಕ್ತಪಡಿಸುತ್ತಿದೆ. ಅಸಹಾಯಕರಿಗೆ ಸೂರು ಒದಗಿಸುವುದು ಅನನ್ಯ ಕಾರ್ಯವಾಗಿದೆ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯಡಿ ಪ್ರಥಮ ಪಿಯುಸಿ ವಿದ್ಯಾರ್ಥಿ, ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯ ಚಂದ್ರ ನಾಯ್ಕ ಮತ್ತು ಲಕ್ಷ್ಮೀ ದಂಪತಿ ಪುತ್ರ ರೇವಂತ ಇವನಿಗೆ ಅಮೆರಿಕದ ಡಾ. ಸುದರ್ಶನ ಮೂರ್ತಿ ಮತ್ತು ಡಾ. ಲಕ್ಷ್ಮೀ ಮೂರ್ತಿ ದಂಪತಿ ನಿರ್ಮಿಸಿಕೊಟ್ಟ ಹಾಗೂ ಕಲಾರಂಗದ ವತಿಯಿಂದ 106ನೇ ಮನೆ ಪ್ರಾಣ ವಿಠ್ಠಲ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಶ್ರೀಕೃಷ್ಣನ ಅನುಗ್ರಹ
ದಾನಿ ಡಾ. ಸುದರ್ಶನ ಮೂರ್ತಿ ಮಾತನಾಡಿ, ಜನರ ಸೇವೆಯಲ್ಲಿಯೇ ಜನಾರ್ದನನ್ನು ಕಾಣುವ ಕಲಾರಂಗದವರ ಪರಿಚಯವಾಗಿರುವುದು ನಮ್ಮ ಭಾಗ್ಯ. ಇದು ಉಡುಪಿಯ ಶ್ರೀಕೃಷ್ಣನ ಅನುಗ್ರಹ. ನಮ್ಮ ಸಂಪತ್ತಿನ ಹತ್ತನೇ ಒಂದು ಭಾಗವನ್ನು ಸಮಾಜಕ್ಕೆ ನೀಡುವುದು ನಮ್ಮ ಸಂಕಲ್ಪ ಎಂದರು. ಲಕ್ಷ್ಮೀ ಮೂರ್ತಿ ಮಾತನಾಡಿ, ಈ ಅವಕಾಶದಿಂದ ನಾವು ಧನ್ಯರಾಗಿದ್ದೇವೆ ಎಂದು ಕನ್ನಡದಲ್ಲಿ ಕೃತಜ್ಞತೆ ಸಲ್ಲಿಸಿದರು.
ಯು.ಎಸ್. ರಾಜಗೋಪಾಲ ಆಚಾರ್ಯ, ಎಂ.ಎಸ್. ಶ್ರೀಪಾದ, ಇಂದಿರಾ ಎಸ್. ಮೂರ್ತಿ, ಬಾಲಕೃಷ್ಣ ಹೆಗ್ಡೆ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ವಿಜಯಕುಮಾರ ಮುದ್ರಾಡಿ, ಭುವನ ಪ್ರಸಾದ ಹೆಗ್ಡೆ, ಸೀತಾರಾಮ ಭಟ್, ಯು.ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ಮರ್ಣೆ ಉಮೇಶ ಭಟ್, ಎಲ್ಲೂರು ಗಣೇಶ ರಾವ್, ಆರ್.ವಸಂತ, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಪ್ರಸನ್ನ ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಗಿರೀಶ ಉಡುಪ, ನುಕ್ಕೂರು ಮತ್ತು ನಾಲ್ಕೂರಿನ ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಾದ ಸುಜಾತಾ, ಕೃಷ್ಣ ನಾಯ್ಕ ಮತ್ತು ಅಧ್ಯಾಪಕ ವೃಂದ, ಯಕ್ಷ ಶಿಕ್ಷಕ ಮಹೇಶ ಮಂದಾರ್ತಿ ಪಾಲ್ಗೊಂಡಿದ್ದರು.
ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.