ದೊಡ್ಡಕೊಪ್ಪದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ವಿದ್ಯಾರ್ಥಿಗಳು.
ಕಡಬ ತಾಲೂಕಿನ ಓಂತ್ರಡ್ಕ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ರಚನೆಗಾಗಿ ಈ ಬಾರಿ ವಿದ್ಯಾರ್ಥಿಗಳಿಗೆ ತಮ್ಮ ಮನೆ ಸಮೀಪದ ಬೂತ್‌ಗಳಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಪ್ರಾಯೋಗಿಕವಾಗಿ ಪರಿಚಯಿಸುವ ವಿಶಿಷ್ಟ ಪ್ರಯೋಗ ನಡೆಸಲಾಗಿದೆ.
ಶಾಲೆ ಶಿಕ್ಷಕ ದಿಲೀಪ್ ಕುಮಾರ್ ಚಿಂತನೆಯಡಿ ಅನುಷ್ಠಾನಿಸಿದ ವಿನೂತನ ಚುನಾವಣಾ ಪ್ರಕ್ರಿಯೆಗೆ ಪಾಲಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆ ಇವಿಎಂ, ಅಂಚೆ ಮತದಾನ ಹಾಗೂ ಮನೆಯಿಂದಲೇ ಆನ್‌ಲೈನ್ ಮತದಾನ ಮಾಡುವ ವ್ಯವಸ್ಥೆ ಪರಿಚಯಿಸಿ ಗಮನ ಸೆಳೆದಿದ್ದ ಈ ಶಾಲೆ, ಈ ವರ್ಷ ಮತ್ತೊಂದು ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ.
ಮೂರು ಮತಗಟ್ಟೆ ಸ್ಥಾಪನೆ: ವಿದ್ಯಾರ್ಥಿಗಳ ವಾಸಸ್ಥಳ ಆಧರಿಸಿ ಓಂಟ್ರಡ್ಕ, ಕೋಡಿಂಬಾಳ ಮತ್ತು ದೊಡ್ಡಕೊಪ್ಪದಲ್ಲಿ ಮೂರು ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಪ್ರತಿ ಬೂತ್‌ಗೆ ಒಳಪಡುವ ವಿದ್ಯಾರ್ಥಿ ಮತದಾರರ ಪಟ್ಟಿ ಸಿದ್ಧಪಡಿಸಿ, ತಮ್ಮ ಬೂತ್ ಯಾವುದು ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಮತಗಟ್ಟೆ, ಮತದಾರರ ಪಟ್ಟಿ ಹಾಗೂ ಚುನಾವಣಾ ವ್ಯವಸ್ಥೆ ಕುರಿತು ಸ್ಪಷ್ಟ ಅರಿವು ಮೂಡಿತು.
ಚುನಾವಣೆಯಲ್ಲಿ ಮೂರು ಮತಗಟ್ಟೆಗೆ ಒಳಪಡುವ ಮಕ್ಕಳ ಫೋಟೋ ಇರುವ ಮತದಾರರ ಪಟ್ಟಿಯನ್ನು ನೋಟಿಸ್‌ನಲ್ಲಿ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಲಾಗಿತ್ತು. ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು.
ಎರಡು ಪಕ್ಷಗಳ ನಡುವೆ ಚುನಾವಣೆ: ವಿದ್ಯಾರ್ಥಿಗಳು ‘ಓಂಟ್ರಡ್ಕ ಮಕ್ಕಳ ಪಕ್ಷ’ ಮತ್ತು ‘ಪ್ರಜಾಪ್ರಭುತ್ವ ಮಕ್ಕಳ ಪಕ್ಷ’ ಎಂಬ ಎರಡು ಪಕ್ಷಗಳ ಅಡಿಯಲ್ಲಿ ಸ್ಪರ್ಧಿಸಿದ್ದರು. ಪಕ್ಷ ವ್ಯವಸ್ಥೆ, ಅಭ್ಯರ್ಥಿಗಳ ಆಯ್ಕೆ, ಬಹುಮತದ ಮಹತ್ವ ಹಾಗೂ ಚುನಾವಣೆ ಸ್ಪರ್ಧೆ ಕುರಿತು ಮಕ್ಕಳಿಗೆ ನೈಜ ಅನುಭವ ದೊರೆಯುವಂತಾಯಿತು. ಚುನಾವಣೆಯಲ್ಲಿ ಓಂಟ್ರಡ್ಕ ಮಕ್ಕಳ ಪಕ್ಷ ಬಹುಮತ ಗಳಿಸಿ ಅಧಿಕಾರದ ಗದ್ದುಗೆಗೇರಿತು.
ಚುನಾವಣಾ ಸಿಬ್ಬಂದಿಯಾಗಿ ಶಿಕ್ಷಕರು ಕಾರ್ಯ
ಚುನಾವಣಾ ದಿನವನ್ನು ಮುಂಚಿತವಾಗಿಯೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. ಕಳೆದ ಶನಿವಾರ ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳು ತಮ್ಮ ಮನೆ ಸಮೀಪದ ಬೂತ್‌ಗಳಿಗೆ ತೆರಳಿ ಮತ ಚಲಾಯಿಸಿ ಮನೆಗೆ ತೆರಳಿದರು. ಬಳಿಕ ಮತಪೆಟ್ಟಿಗೆಯನ್ನು ಶಾಲೆಯಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ, ಮರುದಿನ ಮತ ಎಣಿಕೆ ನಡೆಸಲಾಯಿತು. ಶಾಲೆಯ ಶಿಕ್ಷಕರು ಚುನಾವಣಾ ಸಿಬ್ಬಂದಿಯಾಗಿ ಮೂರು ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಸಿಬ್ಬಂದಿ ಕರೆತರಲು ಚುನಾವಣಾ ವಾಹನ ಮತ್ತು ಭದ್ರತಾ ಸಿಬ್ಬಂದಿಯನ್ನೂ ಆಯೋಜಿಸಲಾಗಿತ್ತು.
ಆಯ್ಕೆಯಾದವರು
ಶ್ರವಣ್ ಕುಮಾರ್ (ಮುಖ್ಯಮಂತ್ರಿ), ಲಕ್ಷ್ಮಣ (ಉಪಮುಖ್ಯ ಮಂತ್ರಿ), ತನುಷ್ (ಗೃಹ ಮಂತ್ರಿ), ಪ್ರತೀಶ್ ಕೆ.ಎಸ್. (ಕೃಷಿ ಮಂತ್ರಿ), ಶ್ರಾವಣೆ ಕೆ.(ವಾರ್ತ ಮಂತ್ರಿ), ಹರ್ಷನ್ಪಿ (ಕ್ರೀಡಾ ಮಂತ್ರಿ), ಮಾನ್ಯಾ (ಶಿಕ್ಷಣ ಮಂತ್ರಿ), ತಂಸೀರ್ (ನೀರಾವರಿ ಮಂತ್ರಿ), ಪೂರ್ಣಿಮಾ (ಆರೋಗ್ಯ ಮಂತ್ರಿ), ಧನುಷ್ (ಸಾಂಸ್ಕೃತಿಕ ಮಂತ್ರಿ) ಆಯ್ಕೆಯಾದರು.
ನಮ್ಮ ಶಾಲೆ ಶಿಕ್ಷಕ ದಿಲೀಪ್ ಕುಮಾರ್ ಪ್ರತಿವರ್ಷ ವಿನೂತನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ವಿವಿಧ ವಿಧಾನ ಪರಿಚಯಿಸುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಬೆಳೆಸಲು ಸಹಕಾರಿ.
— ನೀಲಯ್ಯ ನಾಯ್ಕ, ಮುಖ್ಯಶಿಕ್ಷಕ
ವಿದ್ಯಾರ್ಥಿಗಳಿಗೆ ಚುನಾವಣೆಯ ಎಲ್ಲ ವಿಧಾನ ಪ್ರಾಯೋಗಿಕವಾಗಿ ಪರಿಚಯಿಸಬೇಕು ಎಂಬುದು ನನ್ನ ಆಶಯ. ಹಿಂದಿನ ವರ್ಷಗಳಲ್ಲಿ ಅಳವಡಿಸಿದ್ದ ಮತದಾನ ವಿಧಾನಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಪಾಲಕರ ಪ್ರೋತ್ಸಾಹ ಇಂಥ ಹೊಸ ಪ್ರಯೋಗಗಳಿಗೆ ಪ್ರೇರಣೆಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು, ನಾಗರಿಕ ಜವಾಬ್ದಾರಿ ಹಾಗೂ ನೈಜ ಚುನಾವಣಾ ಪ್ರಕ್ರಿಯೆ ಕುರಿತು ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.
— ದಿಲೀಪ್ ಕುಮಾರ್, ಶಾಲಾ ಶಿಕ್ಷಕ