ಪಳ್ಳಿ ರಾಜಜಾಪುರ ಸಾರಸ್ವತ ಸಂಘದ ವಾರ್ಷಿಕೋತ್ಸವವನ್ನು ಅಡಪಾಡಿ ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಉದ್ಘಾಟಿಸಿದರು. ಪ್ರಮುಖರಾದ ಮೋಹನದಾಸ್ ನಾಯಕ್ ದಾದಬೆಟ್ಟು, ದೇವದಾಸ್ ನಾಯಕ್ ಮುಟ್ಟಿಕಲ್ಲು, ಅರುಣ್ ನಾಯಕ್ ಉಬೆರಬೆಟ್ಟು ಉಪಸ್ಥಿತರಿದ್ದರು.  
ಉಡುಪಿ

ಸಮಾಜದ ಅಭಿವೃದ್ಧಿಗೆ ಅನನ್ಯ ಕೊಡುಗೆ

ಕಾರ್ಕಳ: ಕಳೆದ 28 ವರ್ಷಗಳಿಂದ ರಾಜಾಪುರ ಸಾರಸ್ವತ ಸಂಘ ಪಳ್ಳಿ ತನ್ನ ಕಾರ್ಯ ವ್ಯಾಪ್ತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜ ಸಂಘಟನೆಯಲ್ಲಿ ವಿಶೇಷ ಪಾತ್ರವಹಿಸಿದೆ. ಶೈಕ್ಷಣಿಕ ಮತ್ತು ಸಮಾಜಾಭಿವೃದ್ಧಿಯಲ್ಲಿ ಸಂಘದ ಕೊಡುಗೆ ಅನನ್ಯ ಹಾಗೂ ಅನುಕರಣೀಯ ಎಂದು ಶ್ರೀಕ್ಷೇತ್ರ ಅಡಪಾಡಿ ಉಮಾಮಹೇಶ್ವರ, ಶ್ರೀದುರ್ಗಾಪರಮೇಶ್ವರೀ ದೇವಳದ ಧರ್ಮದರ್ಶಿ ಪುಂಡಲೀಕ ನಾಯಕ್ ಹೇಳಿದರು.
ಅಡಪಾಡಿ ದೇವಳದ ಸಭಾಂಗಣದಲ್ಲಿ ಪಳ್ಳಿ ರಾಜಾಪುರ ಸಾರಸ್ವತ ಸಂಘದ 28ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಮೋಹನದಾಸ್ ನಾಯಕ್ ದಾದಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದೇವದಾಸ್ ನಾಯಕ್ ಮುಟ್ಟಿಕಲ್ಲು ಭಾಗವಹಿಸಿದರು.
ಕ್ರೀಡಾ ಕಾರ್ಯದರ್ಶಿ ಅರುಣ್ ನಾಯಕ್ ಉಬೆರಬೆಟ್ಟು ಸ್ಪರ್ಧಾ ವಿಜೇತರನ್ನು ಪರಿಚಯಿಸಿದರು. ಕಾರ್ಯದರ್ಶಿ ಶಿವಾನಂದ ನಾಯಕ್ ಕಡಂಬು ವರದಿ ಓದಿದರು. ಅಕ್ಷಯಾ, ಪುಷ್ಪಾಂಗಿ, ದಿವ್ಯಾ ಪ್ರಾರ್ಥಿಸಿದರು. ಕೋಶಾಧಿಕಾರಿ ಸಂತೋಷ್ ನಾಯಕ್ ದಾದಬೆಟ್ಟು ಸ್ವಾಗತಿಸಿದರು. ಹರೀಶ್ ನಾಯಕ್ ಬೆಳಂಕಾಲೆ ನಿರೂಪಿಸಿದರು. ರಮೇಶ್ ನಾಯಕ್ ಮುಳಿಮಾರು ನಿಂಜೂರು ವಂದಿಸಿದರು.

ಸನ್ಮಾನ, ಬಹುಮಾನ ವಿತರಣೆ

ರಾಜ್ಯಕ್ಕೆ 9ನೇ ರ‌್ಯಾಂಕ್ ಮತ್ತು ತಾಲೂಕಿಗೆ 2ನೇ ರ‌್ಯಾಂಕ್ ಗಳಿಸಿದ ವೈಷ್ಣವಿ ಅವರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ವತಿಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಪ್ರೇಮಾ ನಾಯಕ್ ಅವರಿಗೆ 60 ಸಾವಿರ ರೂ. ವೆಚ್ಚದಲ್ಲಿ ಮನೆ ದುರಸ್ತಿ ಮಾಡಿ ಕೊಡಲಾಯಿತು. ಮಕ್ಕಳಿಗೆ ಹಾಗೂ ಸಮಾಜದವರಿಗಾಗಿ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.