ಏಕವಿನ್ಯಾಸ ಪ್ರಾತಿನಿಧಿಕ ಚಿತ್ರ. 
ಉಡುಪಿ

ಏಕ ವಿನ್ಯಾಸ ಇನ್ನೂ ಮರೀಚಿಕೆ!

ಗ್ರಾಮೀಣರ ಬೇಡಿಕೆಗೆ ದೊರೆಯದ ಮನ್ನಣೆ

ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಗ್ರಾಮೀಣ ಜನತೆಯ ಅಗತ್ಯದ ಬೇಡಿಕೆಯಾದ 25 ಸೆಂಟ್ಸ್‌ವರೆಗಿನ ಏಕ ವಿನ್ಯಾಸ ಅನುಮೋದನೆಗೆ ಗ್ರಾಮ ಪಂಚಾಯಿತಿಗಳಿಗೆ ಮತ್ತೆ ಅಧಿಕಾರ ಒದಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಇದರಿಂದ ಗ್ರಾಪಂಗಳಿಗೆ ಬಿ ಖಾತಾ ಸ್ವತ್ತುಗಳಿಗೆ ಮಾತ್ರವೇ ಅನುಮೋದನೆ ನೀಡುವ ಅಧಿಕಾರವಿದ್ದು, ಉಳಿದ ಎಲ್ಲ ವಿನ್ಯಾಸ ಅನುಮೋದನೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಚೇರಿಗಳಿಗೆ ಅಲೆದಾಟ ಅನಿವಾರ್ಯವಾಗಿದೆ.

ಕರಾವಳಿ ಜಿಲ್ಲೆಗಳಿಗೆ ಸಂಕಷ್ಟ

ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮ ಠಾಣಾ ಪರಿಕಲ್ಪನೆ ಇದ್ದು, ಅಲ್ಲಿ ಏಕ ನಿವೇಶನ ಮತ್ತು ಖಾತೆ ವಿತರಣೆಗೆ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ದಿಶಾಂಕ್ ಸರ್ವೇ ಮೂಲಕ ಜಿಪಿಎಸ್ ಮಾಡಲೂ ಅವಕಾಶ ಇದೆ. ಆದರೆ ಕರಾವಳಿಯ ಉಡುಪಿ, ದ.ಕ. ಜಿಲ್ಲೆಗಳಲ್ಲಿ ತುಂಡು ಭೂಮಿ ಹೆಚ್ಚಾಗಿದ್ದು, ಪಟ್ಟಾ ಜಮೀನುಗಳ ಭೂ ಪರಿವರ್ತನೆಯನ್ನು ತಹಸೀಲ್ದಾರ್ ಹಿಂಬರಹದ ಮೂಲಕ ಪಡೆಯಲಾಗುತ್ತದೆ. ಈ ಸಣ್ಣ ಪುಟ್ಟ 5-10 ಸೆಂಟ್ಸ್‌ವರೆಗಿನ ಜಾಗದಲ್ಲಿ ಭೂ ಪರಿವರ್ತಿಸಿ ಮನೆ ಕಟ್ಟಿಕೊಂಡಿರುವ ರೈತರು, ಜನಸಾಮಾನ್ಯರು ಹೊಸ ಇ-ಸ್ವತ್ತು ವ್ಯವಸ್ಥೆಯಿಂದ ಪ್ರಾಧಿಕಾರಕ್ಕೆ ಅಲೆದಾಡುವಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಈ ಪ್ರಕರಣಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಸಮಸ್ಯೆಗಳೇನು?

ಲಾಗಾಯ್ತಿನಿಂದ ದಾರಿ ಹಕ್ಕನ್ನು(ಈಸ್‌ಮೆಂಟ್) ಅನುಭವಿಸಿಕೊಂಡು ಬರುತ್ತಿರುವುದು, ಗದ್ದೆಯ ಹುಣಿಯಲ್ಲಿ ದಾರಿ ಇರುವವರು, ವಿಭಾಗ ಪತ್ರದಲ್ಲಿ ದಾರಿ ಇರುವವರು ಉಡುಪಿ, ದ.ಕ.ದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಪ್ರಾಧಿಕಾರದ ಪ್ರಕಾರ ಅಧಿಕೃತ ಸಂಪರ್ಕ ರಸ್ತೆ ಇಲ್ಲದೆ ಏಕ ವಿನ್ಯಾಸ ನೀಡಲು ಸಾಧ್ಯವಿಲ್ಲ. ಈ ಸಮಸ್ಯೆಗೆ ದಾರಿಗಳ ಬಗ್ಗೆ ಅಧಿಸೂಚನೆ ಹೊರಡಿಸುವ ಬಗ್ಗೆ ಸರ್ಕಾರ ಗೆಜೆಟ್ ನೊಟಿಫಿಕೇಶ್ ಹೊರಡಿಸಿದ್ದು ಗ್ರಾಮಮಟ್ಟದಲ್ಲಿ ಅನುಷ್ಠಾನ ಬಾಕಿ ಇದೆ.

ಸಾಲ/ಸೌಲಭ್ಯ ಕನಸು

ಏಕ ವಿನ್ಯಾಸ ಇಲ್ಲದೆ ನಿವೇಶನ ನೋಂದಣಿ ಆಗುವುದಿಲ್ಲ. ಕೃಷಿ ಭೂಮಿ ಬಿ ಖಾತೆಗಳಲ್ಲಿ ಕಟ್ಟಡ ಇದ್ದರೆ ಆರ್‌ಟಿಸಿ ಭೂಮಿ ತಂತ್ರಾಂಶದಲ್ಲಿ ನಿವೇಶನ ದಾಖಲಾಗಿ ನೋಂದಣಿಗೆ ಅವಕಾಶ ನೀಡುವುದಿಲ್ಲ. ಅದರಿಂದ ಮಾರಾಟ/ ದಾನ/ ವಿಭಾಗ ಪತ್ರ ನೋಂದಣಿಗೆ ಸಮಸ್ಯೆಯಾದರೆ ಮನೆ, ವಿವಾಹ ಇತ್ಯಾದಿಗಳಿಗೆ ಸಾಲ ಪಡೆಯಲೂ ಅಸಾಧ್ಯವಾಗಿದೆ. ಸರ್ಕಾರದ ರಾಜಸ್ವಕ್ಕೂ ಕತ್ತರಿ ಬಿದ್ದಿದೆ. ಬಿ ಖಾತಾ ಸ್ವತ್ತುಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

ಸುತ್ತೋಲೆಯಲ್ಲೇನಿದೆ?

ಬಿ ಖಾತೆ ನೀಡಲು ಅರ್ಹವಾಗಿರುವ ಮತ್ತು ಎ ಖಾತೆಗೆ ಪರಿವರ್ತಿಸಲು ಕಾನೂನಿನಲ್ಲಿ ಅವಕಾಶ ಇರುವ ಒಂದು ಸಾವಿರ ಚದರ ಮೀಟರ್ ವಿಸ್ತೀರ್ಣದ ಸ್ವತ್ತುಗಳಿಗೆ ಮಾತ್ರವೇ ಏಕ ವಿನ್ಯಾಸ ನೀಡಲು ಸ್ಥಳೀಯ ಸಂಸ್ಥೆಗಳಿಗೆ ಅವಕಾಶವಿದ್ದು, ಉಳಿದ ಸ್ವತ್ತುಗಳಿಗೆ ನಗರ ಯೋಜನೆ ಪ್ರಾಧಿಕಾರದ ಅನುಮೋದನೆ ಕಡ್ಡಾಯವಾಗಿದೆ. 2026 ಸೆಪ್ಟೆಂಬರ್ 9, 24 ಹಾಗೂ ಅಕ್ಟೋಬರ್ 5ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಏಕ ವಿನ್ಯಾಸ ಅನುಮೋದನೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನವೆಂಬರ್ 9ರ ಸುತ್ತೋಲೆಯಲ್ಲಿ ಸರ್ಕಾರದ ನೀಡಿದೆ.

ಏಕೈಕ ಪರಿಹಾರ

ಏಕ ವಿನ್ಯಾಸದ ಸಮಸ್ಯೆ ಬಗ್ಗೆ ಈಗಾಗಲೇ ಹಲವು ಬಾರಿ ಸ್ಥಳೀಯ ಶಾಸಕರು ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಡಿ.2ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಉಡುಪಿ, ದ.ಕ. ಜಿಲ್ಲೆಗಳಿಗೆ ಈ ಹಿಂದೆ ಇಲ್ಲಿನ ಭೂ ಸ್ಥಿತಿಗೆ ಅನುಗುಣವಾಗಿ ಖಾತಾ ವಿತರಣೆಗೆ ಇದ್ದ ಅವಕಾಶಗಳನ್ನು ಮರುಪರಿಶೀಲಿಸಿ ಅಧಿಸೂಚನೆ ಹೊರಡಿಸಲು ಹಕ್ಕೊತ್ತಾಯ ಮಾಡಬೇಕು ಎಂಬುದು ಜಿಲ್ಲೆಯ ಜನರ ಅಪೇಕ್ಷೆಯಾಗಿದೆ. ಸದ್ಯಕ್ಕೆ ಸಮಸ್ಯೆ ಪರಿಹಾರಕ್ಕೆ ಇದೊಂದೇ ಪರಿಹಾರವಾಗಿದೆ.

ಇ-ಸ್ವತ್ತಿಗೆ 22 ದಿನ ಕಾಲಮಿತಿ

ಇ-ಸ್ವತ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಲ್ಲಿ ಕಾರ್ಯದರ್ಶಿ ಲಾಗಿನ್‌ನಲ್ಲಿ 7 ದಿನ ನೋಟಿಸ್ ಬಳಿಕ ಇ-ಕಡತ ಪಿಡಿಒಗೆ ರವಾನೆಯಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ 5 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು. ಬಳಿಕ ಪಿಡಿಒ 4 ದಿನಗಳಲ್ಲಿ ತಾಪಂ ಇಒಗೆ ಶಿಫಾರಸು ಸಲ್ಲಿಸಬೇಕು. ಇಒ ಪರಿಶೀಲನೆ ನಡೆಸಿ 4 ದಿನಗಳಲ್ಲಿ ಅನುಮೋದನೆ ಅಥವಾ ತಿರಸ್ಕಾರಕ್ಕೆ ಸೂಚನೆ ನೀಡಬೇಕು. ಈ ಬಳಿಕ ಪಿಡಿಒ 2 ದಿನಗಳಲ್ಲಿ ಅಂತಿಮ ಆದೇಶ/ ಇ-ಖಾತೆ ಹೊರಡಿಸಬೇಕು. ಹೀಗೆ ಒಟ್ಟು 22 ದಿನ ಕಾಲಮಿತಿ ನಿಗದಿಪಡಿಸಲಾಗಿದೆ. ಆಕ್ಷೇಪಣೆ ಇಲ್ಲದಿದ್ದಲ್ಲಿ 17 ದಿನಗಳಲ್ಲಿ ಖಾತೆ ಲಭ್ಯವಾಗಲಿದೆ.

ಈ ಮೊದಲು ಏಕವಿನ್ಯಾಸ ಅನುಮೋದನೆ 25 ಸೆಂಟ್ಸ್ ವರೆಗೆ ಗ್ರಾಪಂನಲ್ಲಿ, 25 ಸೆಂಟ್ಸ್‌ನಿಂದ 99ರವರೆಗೆ ಇಒ ಅನುಮೋದನೆ ಅವಕಾಶವಿತ್ತು. ಈಗ ಸರ್ಕಾರ ಎಲ್ಲವನ್ನೂ ಪ್ರಾಧಿಕಾರಕ್ಕೆ ನೀಡಿದ್ದರಿಂದ ಕರಾವಳಿ ಜಿಲ್ಲೆಯ ಗ್ರಾಮಾಂತರ ಭಾಗದ ಜನ ತುಂಬಾ ಕಷ್ಟ ಪಡುವಂತಾಗಿದೆ. ಪ್ರಾದೇಶಿಕ ವಾಸ್ತವತೆ ಅರ್ಥೈಸದೇ ಎಸಿ ಕೊಠಡಿಯಲ್ಲಿ ಕಾನೂನು ರಚನೆಯಾದರೆ ಇದೆ ಸ್ಥಿತಿ. ಸರ್ಕಾರ ಅದನ್ನು ಮನಗಂಡು ಮೊದಲಿನಂತೆ ಅವಕಾಶ ಮಾಡಿ ಕೊಡಬೇಕು
ಶಶಿಧರ ವಾಗ್ಳೆ ಬಂಟಕಲ್ಲು ಮಾಜಿ ಅಧ್ಯಕ್ಷ, ಬೆಳ್ಳೆ ಗ್ರಾಪಂ
ಏಕ ವಿನ್ಯಾಸ ಸಮಸ್ಯೆ ಬಗ್ಗೆ ವಿಶೇಷವಾಗಿ ನಮ್ಮ ಕರಾವಳಿ ಜಿಲ್ಲೆಗಳ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಲ್ಲಿಯೂ ಚರ್ಚೆ ನಡೆಸಲಾಗಿದೆ. ಇದರ ಫಲವಾಗಿ ತಂತ್ರಾಂಶ ನವೀಕರಣ ಮಾಡಲಾಗುತ್ತಿದೆ. ಸಮಸ್ಯೆ ಬಗೆಹರಿಯದಿದ್ದಲ್ಲಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮತ್ತೆ ಧ್ವನಿ ಎತ್ತಲಾಗುವುದು.
ಗುರ್ಮೆ ಸುರೇಶ್ ಶೆಟ್ಟಿ ಶಾಸಕ, ಕಾಪು