ಬಾಲಕಿಯ ಕಣ್ಣಿನೊಳಗಿದ್ದ ಜೀವಂತ ಪರಾವಲಂಬಿ ಹುಳುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ಕೆಎಂಸಿಯ ಡಾ. ಯೋಗೀಶ್ ಎಸ್. ಕಾಮತ್ ಹಾಗೂ ವೈದ್ಯರ ತಂಡ. ಕಣ್ಣಿನಿಂದ ಹೊರ ತೆಗೆದ ದಾರದ ಮಾದರಿಯ ಪರಾವಲಂಬಿ ಹುಳು. (ಬಲಭಾಗದ ಚಿತ್ರ).
* ಮಣಿಪಾಲ ಕೆಎಂಸಿ ನೇತ್ರತಜ್ಞರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
* ಕಣ್ಣಿನ ಪೊರೆಯ ಕೆಳಗಿದ್ದ ಪರಾವಲಂಬಿ ಜೀವಿ
ಉಡುಪಿ: ನಾಲ್ಕು ವರ್ಷದ ಬಾಲಕಿಯ ಕಣ್ಣೊಳಗೆ ಇದ್ದ ಜೀವಂತ ಹುಳುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ತಜ್ಞರು ಯಶಸ್ವಿ ಶಸ್ತ್ರಚಿಕಿತ್ಸೆ (ಎಕ್ಸಿಶನ್ ಬಯಾಪ್ಸಿ)ಯ ಮೂಲಕ ಹೊರತೆಗೆದಿದ್ದಾರೆ. ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಕಣ್ಣಿನಲ್ಲಿದ್ದ ನೋವು ವಾಸಿಯಾಗಿದೆ.
ತಮ್ಮ ಮಗಳ ಬಲಗಣ್ಣು ನಿರಂತರ ಕೆಂಪಾಗುವಿಕೆ ಮತ್ತು ಕಣ್ಣಿನ ಚಲನೆಯಲ್ಲಿ ಕಿರಿಕಿರಿ ಆಗುತ್ತಿರುವುದರಿಂದ ಪಾಲಕರು ಮಣಿಪಾಲ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗಕ್ಕೆ ಕರೆತಂದಿದ್ದರು.
ಪೊರೆಯಲ್ಲಿತ್ತು ಹುಳು
ಬಾಲಕಿಯ ಕಣ್ಣು ಪರೀಸಿದ ವೈದ್ಯರಿಗೆ ಕಂಜಂಕ್ಟಿವಾ ಪೊರೆಯ ಕೆಳಗೆ ಸಣ್ಣದಾಗಿ ಮಿಡಿಯುತ್ತಿರುವ ಭಾಗ ಗಮನಿಸಿದರು. ಸ್ಲಿಟ್-ಲ್ಯಾಂಪ್ ಬಯೋಮೈಕ್ರೋಸ್ಕೋಪಿ ಮೂಲಕ ಪರೀಕ್ಷಿಸಿದಾಗ ಜೀವಂತವಾಗಿದ್ದ ಪರಾವಲಂಬಿ ಹುಳು ಇರುವುದು ಕಂಡುಬಂತು. ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ಅವರ ನೇತೃತ್ವದಲ್ಲಿ ಡಾ. ಪ್ರಿಯಲ್ ಅಗರ್ವಾಲ್, ಡಾ. ಅಪರ್ಣಾ (ಅರಿವಳಿಕೆ ವಿಭಾಗ) ಮತ್ತು ಶಸ್ತ್ರ ಚಿಕಿತ್ಸಾ ತಂಡವು ಸಾಮಾನ್ಯ ಅರಿವಳಿಕೆಯಡಿ ಎಕ್ಸಿಶನ್ ಬಯಾಪ್ಸಿ ನಡೆಸಿತು.
ಹೊರತೆಗೆದ ಅಂಗಾಂಶದಿಂದ ತೆಳುವಾದ ಹಾಗೂ ದಾರದಂತಹ ಮಾದರಿಯ ಹುಳು ಹೊರಬಂದು ಚಲಿಸಲು ಆರಂಭಿಸಿತು. ಬಾಲಕಿಗೆ ಇದೀಗ ಕಣ್ಣಿನೊಳಗೆ ಆಗುತ್ತಿದ್ದ ಕಿರಿಕಿರಿ, ಕೆಂಪಾಗುವಿಕೆ ಕಡಿಮೆಯಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.
ಸಮುದಾಯಕ್ಕೆ ಎಚ್ಚರಿಕೆ
ಈ ಶಸ್ತ್ರಚಿಕಿತ್ಸೆಯು ಕೆಎಂಸಿಯ ಸಂಘಟಿತ, ಬಹು ಆಯಾಮ ಚಿಕಿತ್ಸಾ ಆರೈಕೆಯ ಸಾಮರ್ಥ್ಯ ಪ್ರತಿಬಿಂಬಿಸುತ್ತದೆ. ಅಲ್ಲದೆ, ಇಂತಹ ಸೋಂಕುಗಳನ್ನು ತಡೆಗಟ್ಟುವಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸಾಕುಪ್ರಾಣಿಗಳಿಗೆ ನಿಯಮಿತ ಪಶುವೈದ್ಯಕೀಯ ಆರೈಕೆಯ ಮಹತ್ವದ ಬಗ್ಗೆಯೂ ಸಮುದಾಯಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿಇಒ ಡಾ. ಸುಧಾಕರ್ ಕಂಟಿಪುಡಿ ತಿಳಿಸಿದ್ದಾರೆ.
ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುವಿಕೆ
ಕಣ್ಣಿನೊಳಗೆ ಸೇರಿಕೊಂಡಿದ್ದ ಹುಳುವಿನ ಜೀವನದ ರೀತಿಯನ್ನು "ಡೈರೊಫಿಲೇರಿಯಾ ರೆಪೆನ್ಸ್' ಎಂದು ಗುರುತಿಸಲಾಗುತ್ತದೆ. ಡೈರೊಫಿಲೇರಿಯಾಸಿಸ್ ಎನ್ನುವುದು ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಹರಡುವ ಝೂನೋಟಿಕ್ ಸೋಂಕಾಗಿದೆ. ಇದು ಸಾಮಾನ್ಯವಾಗಿ ನಾಯಿ ಮತ್ತು ಇನ್ನಿತರ ಪ್ರಾಣಿಗಳಿಗೆ ಈ ಬಗೆಯ ಸೋಂಕು ತಗುಲುತ್ತದೆ. ಅಪರೂಪಕ್ಕೆ ಮನುಷ್ಯರಿಗೂ ಈ ಸೋಂಕು ಹರಡಬಹುದು. ಅದು ಕಣ್ಣಿನ ಸುತ್ತಲೂ ನೆಲೆಗೊಳ್ಳುತ್ತದೆ ಎಂದು ಕೆಎಂಸಿ ಮಣಿಪಾಲದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿನಯ್ ಖನ್ನಾ ತಿಳಿಸಿದ್ದಾರೆ.
"
ಮಾನವರಲ್ಲಿ ಡೈರೊಫಿಲೇರಿಯಾಸಿಸ್ ಅಪರೂಪವಾದರೂ ಸಹ ಕರಾವಳಿ ಪ್ರದೇಶಗಳಲ್ಲಿ ಇಂತಹ ಪ್ರಕರಣ ಕಂಡುಬರುತ್ತವೆ. ತ್ವರಿತ ರೋಗನಿರ್ಣಯ ಮತ್ತು ಸಕಾಲಿಕ ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಇಂತಹ ಸೋಂಕಿಗೆ ತುತ್ತಾಗಿದ್ದ ಪುಟ್ಟ ಬಾಲಕಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೇಗ ಚೇತರಿಸಿಕೊಂಡಿರುವುದು ಸಂತಸದ ಸಂಗತಿ.
— ಡಾ. ಯೋಗೀಶ್ ಎಸ್. ಕಾಮತ್. ಕೆಎಂಸಿ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ.