ಕೆರ್ವಾಶೆ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿದ ನಿಟ್ಟೆ ವಿದ್ಯಾಸಂಸ್ಥೆಯ ರಚನಾ ಕ್ಲಬ್‌ನ ವಿದ್ಯಾರ್ಥಿಗಳ ತಂಡ. 
ಉಡುಪಿ

ಕೆರ್ವಾಶೆ ಶಾಲೆಗೆ ಬಣ್ಣಗಳ ಮೆರುಗು

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಶಿಕ್ಷಣದೊಂದಿಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡಿರುವ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಯಲದ ವಿದ್ಯಾರ್ಥಿಗಳು ಮತ್ತೊಮ್ಮೆ ತಮ್ಮ ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ಕೌನ್ಸೆಲಿಂಗ್, ವಿದ್ಯಾರ್ಥಿಗಳ ಕ್ಷೇಮ, ತರಬೇತಿ ಮತ್ತು ಪ್ಲೇಸ್ಮೆಂಟ್ ವಿಭಾಗವಾದ ಅಭ್ಯುದಯದ ಅಡಿಯಲ್ಲಿ ರಚನಾ ಕ್ಲಬ್‌ನ ವಿದ್ಯಾರ್ಥಿಗಳು ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳಲ್ಲಿ ಚಿತ್ರಕಲೆ ರಚಿಸಿ ಶಾಲಾವರಣಕ್ಕೆ ಹೊಸ ಮೆರುಗು ತಂದು ಮೆಚ್ಚುಗೆ ಪಡೆದಿದ್ದಾರೆ.
ನಾಲ್ಕು ದಿನಗಳ ಕಾಲ ರಚನಾ ಕ್ಲಬ್‌ನ 16 ವಿದ್ಯಾರ್ಥಿಗಳ ತಂಡ ಮಕ್ಕಳಿಗೆ ಪಠ್ಯಕ್ಕೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ತರಗತಿಗಳಲ್ಲಿ ಹಾಗೂ ಕೊಠಡಿಗಳಲ್ಲಿ ಬಣ್ಣಬಣ್ಣದ ಕಲಾಕೃತಿಗಳನ್ನು ರಚಿಸಿದ್ದಾರೆ. ನಿಟ್ಟೆ ಮಹಾಲಿಂಗ ಶಿಕ್ಷಣ ಸಂಸ್ಥೆಯ ಎನ್ನೆಸ್ಸೆಸ್ಸ್ ತಂಡ ಸಹಕರಿಸಿದೆ.

ಕಲಿಕಾಸಕ್ತಿ ವೃದ್ಧಿಗೆ ಪೂರಕ

ಶಾಲಾ ವಾತಾವರಣ ಆಕರ್ಷಣೀಯವಾಗಿಸಲು ಹಾಗೂ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಳಕ್ಕೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳನ್ನು ಶಾಲೆಯಿಂದ ವಿಮುಖರಾಗದಂತೆ ತಡೆಯಲು ಸಹಕಾರಿಯಾಗಲಿದೆ. ಶೈಕ್ಷಣಿಕ ಪೂರಕ ಚಿತ್ರಗಳು, ಪರಿಸರ ಜಾಗೃತಿ ಮೂಡಿಸುವ ಕಲಾಕೃತಿಗಳು ಹಾಗೂ ಸ್ಫೂರ್ತಿದಾಯಕ ವರ್ಣಚಿತ್ರಗಳು ಶಾಲೆಗಳ ಗೋಡೆಗಳಲ್ಲಿ ಮೂಡಿಬಂದಿವೆ.

ಶ್ಲಾನೀಯ ಪ್ರಯತ್ನ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸಂಸ್ಥೆಯ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ‘ಅಭ್ಯುದಯ’ ವಿಭಾಗದ ವಾರ್ಗದರ್ಶನದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹೆಚ್ಚು ಹಮ್ಮಿಕೊಳ್ಳುತ್ತಿದ್ದಾರೆ. ಕೆರ್ವಾಶೆ ಶಾಲೆ ಆವರಣಕ್ಕೆ ಹೊಸ ರೂಪ ನೀಡಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಸ್ಥಳೀಯರು, ನಿಟ್ಟೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕರು, ಕೆರ್ವಾಶೆ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

ನಮ್ಮ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚುವುದರ ಜತೆಗೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಇಡೀ ಶಾಲಾವರಣ ಸುಂದರಗೊಳಿಸಿದ್ದಾರೆ. ನಿಟ್ಟೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುವಂತದ್ದು. ಇಡೀ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ.

ಸಂಸ್ಥೆಯ ವಿದ್ಯಾರ್ಥಿಗಳ ರಚನಾ ತಂಡದ ಸದಸ್ಯರು ನಾಲ್ಕು ದಿನಗಳ ಕಾಲ ಸರ್ಕಾರಿ ಶಾಲೆಯಲ್ಲಿ ಗೋಡೆಗಳಿಗೆ ಬಣ್ಣ ಹಚ್ಚುವ ಮೂಲಕ ಸುಂದರಗೊಳಿಸುವ ಕಾರ್ಯ ವಾಡಿದ್ದಾರೆ. ಈ ಕಾರ್ಯ ಇತರರಿಗೂ ಮಾದರಿಯಾಗಿದ್ದು, ಬಿಡುವಿನ ಅವಧಿ ಸದುಪಯೋಗಿಸಿಕೊಳ್ಳಬೇಕು.