ಮೀನುಗಾರಿಕೆ ಇಲ್ಲದೆ ಬಿಕೋ ಎನ್ನುತ್ತಿರುವ ಗಂಗೊಳ್ಳಿ ಮೀನುಗಾರಿಕಾ ಬಂದರು.
ಉಡುಪಿ ಜಿಲ್ಲೆಯ ಪ್ರಸಿದ್ಧ ಮೀನುಗಾರಿಕಾ ಬಂದರು ಪ್ರದೇಶವಾದ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮೂರು ತಿಂಗಳಿನಿಂದ ಬರದ ಛಾಯೆ ಆವರಿಸಿದ್ದು, ಮತ್ಸೃಕ್ಷಾಮದಿಂದ ಮೀನುಗಾರರು ಕಂಗಾಲಾಗಿದ್ದಾರೆ. ಗಂಗೊಳ್ಳಿ ಮೀನುಗಾರಿಕಾ ಬಂದರಿನಿಂದ ಕಡಲಿಗಿಳಿದ ಬೋಟ್‌ಗಳು ಮತ್ಸೃಕ್ಷಾಮದಿಂದ ಬರಿಗೈಯಲ್ಲಿ ವಾಪಸಾಗುತ್ತಿದ್ದು, ಸ್ಥಳೀಯ ಮೀನುಗಾರರಿಗೆ ಆರ್ಥಿಕ ಹೊಡೆತ ನೀಡಿದೆ.
ಲಂಗರು ಹಾಕಿದ ಬೋಟ್‌ಗಳು
ಮೀನುಗಾರಿಕಾ ಋತುವಿನ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆಸುತ್ತಿದ್ದ ಈ ಭಾಗದ ಮೀನುಗಾರರು ಈ ಬಾರಿ ಸಂಕಷ್ಟಕ್ಕೀಡಾಗಿದ್ದಾರೆ. ಫಿಶಿಂಗ್, ಪರ್ಸಿನ್ ಬೋಟ್‌ಗಳು ಗಂಗೊಳ್ಳಿ ಬಂದರಿನಲ್ಲಿ ಲಂಗರು ಹಾಕಿವೆ. ಕೆಲವೊಂದು ಟ್ರಾಲ್‌ಬೋಟ್, ಫಿಶಿಂಗ್ ಬೋಟ್ ಮತ್ತು ದೋಣಿಗಳು ಕಡಲಿಗಿಳಿಯುತ್ತಿದ್ದರೂ ಮೀನು ದೊರೆಯುತ್ತಿಲ್ಲ. ಮೀನುಗಾರಿಕೆ ಇಲ್ಲದೆ ಗಂಗೊಳ್ಳಿ ಬಂದರು ಬಿಕೋ ಎನ್ನುತ್ತಿದ್ದು, ಬಡ ಮೀನುಗಾರ ಕಾರ್ಮಿಕರು, ಮಹಿಳೆಯರು ಕೆಲಸ ಇಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ತಲೆದೋರಿದೆ.
ಆರ್ಥಿಕ ನಷ್ಟಕ್ಕೆ ಮುಂಜಾಗ್ರತಾ ಕ್ರಮ
ಮೂರು ತಿಂಗಳಿನಿಂದ ಬಹುತೇಕ ಬೋಟ್‌ಗಳು ಕಡಲಿಗಿಳಿದಿಲ್ಲ. ಸಮುದ್ರದಲ್ಲಿ ಮೀನು ದೊರೆಯದಿರುವುದರಿಂದ ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಖಾಲಿಯಾಗಿ ದಡ ಸೇರುತ್ತಿವೆ. ಬೆಳಕು ಮೀನುಗಾರಿಕೆ ನಡೆಸುವ ಬೋಟ್‌ಗಳಿಗೂ ನಿರೀಕ್ಷೆಗೆ ತಕ್ಕಂತೆ ಮೀನು ದೊರೆಯದಿರುವುದರಿಂದ ಬೋಟ್ ಮಾಲೀಕರು ಚಿಂತಿತರಾಗಿದ್ದಾರೆ. ವೆಚ್ಚಕ್ಕೆ ತಕ್ಕ ಲಾಭ ಸಿಗುತ್ತಿಲ್ಲ. ಬೋಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರರಿಗೆ ನೀಡಲು ದುಡ್ಡಿಲ್ಲ. ಹೀಗಾಗಿ ಆರ್ಥಿಕ ನಷ್ಟ ಸಂಭವಿಸದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಅನಿವಾರ್ಯವಾಗಿ ಬೋಟ್‌ಗಳನ್ನು ಬಂದರಿನಲ್ಲಿ ಲಂಗರು ಹಾಕಲಾಗಿದೆ ಎಂದು ಸ್ಥಳೀಯ ಮೀನುಗಾರರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮೀನಿನ ಲಭ್ಯತೆ ಕಡಿಮೆ
ಕಳೆದ ಎರಡು ತಿಂಗಳಿನಿಂದ ಮತ್ಸೃಕ್ಷಾಮದ ಛಾಯೆ ಆವರಿಸಿರುವುದರಿಂದ ಬಹುತೇಕ ಬೋಟ್‌ಗಳು ಕಡಲಿಗಿಳಿಯುವ ಧೈರ್ಯ ತೋರುತ್ತಿಲ್ಲ. ಮೀನುಗಳಿಗೆ ಪ್ರಸಿದ್ಧವಾಗಿರುವ ಕರಾವಳಿಯ ಈ ಪ್ರದೇಶಗಳಲ್ಲಿ ಮೀನಿನ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಮೀನುಗಳ ಬೆಲೆ ಗಗನಕ್ಕೇರುತ್ತಿದೆ. ಒಂದೆಡೆ ಮತ್ಸೃಕ್ಷಾಮ ಇನ್ನೊಂದೆಡೆ ಮೀನುಗಳ ದರದಲ್ಲಿ ಭಾರಿ ಏರಿಕೆಯಾಗಿರುವುದರಿಂದ ಮೀನುಗಾರರು ಕಂಗಾಲಾಗಿದ್ದಾರೆ. ಈ ವರ್ಷ ಎರಡು ತಿಂಗಳ ಕಾಲ ಸರಿಯಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಮೀನುಗಳಿಲ್ಲದೆ ಮೀನುಗಾರರು, ಮೀನು ಮಾರಾಟಗಾರರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿರುವ ಗಂಗೊಳ್ಳಿಯ ಜನರ ಆರ್ಥಿಕ ಪರಿಸ್ಥಿತಿ ಕೂಡ ಬಿಗಡಾಯಿಸುತ್ತಿದೆ.
ಪ್ರಸಕ್ತ ಸಾಲಿನ ಮೀನುಗಾರಿಕೆ ಋತು ಅಂತ್ಯವಾಗಲು ಇನ್ನೆರಡು ತಿಂಗಳು ಬಾಕಿ ಉಳಿದಿದ್ದು, ಮತ್ಸೃಕ್ಷಾಮ ಹಾಗೂ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಅವಧಿಗೆ ಮೊದಲೇ ಮೀನುಗಾರಿಕೆ ಋತು ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಗಂಗೊಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮತ್ಸೃಕ್ಷಾಮ ತಲೆದೋರಿದ್ದು, ಬಹುತೇಕ ಬೋಟ್‌ಗಳು ಗಂಗೊಳ್ಳಿಯಲ್ಲಿ ಲಂಗರು ಹಾಕಿವೆ. ಮತ್ಸೃಕ್ಷಾಮದಿಂದ ಈ ಭಾಗದ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಮ್ಮ ದೈನಂದಿನ ಖರ್ಚುಗಳನ್ನು ಸರಿದೂಗಿಸಲು ಮೀನುಗಾರರು ಕಷ್ಟಪಡುತ್ತಿದ್ದಾರೆ. ಆರಂಭದ ಕೆಲವು ತಿಂಗಳು ಹೊರತುಪಡಿಸಿದರೆ ಉಳಿದ ದಿನಗಳಲ್ಲಿ ಕಾಡುತ್ತಿರುವ ಮತ್ಸೃಕ್ಷಾಮದಿಂದ ಮೀನುಗಾರರು ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ಸರ್ಕಾರ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು.
ಕಳೆದ ಎರಡು ತಿಂಗಳಿನಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಮೀನುಗಾರಿಕೆ ಇಲ್ಲದಿರುವುದರಿಂದ ದೈನಂದಿನ ಜೀವನ ನಡೆಸಲು ಕಷ್ಟವಾಗುತ್ತಿದೆ. ಮೀನುಗಾರಿಕೆಗೆ ತೆರಳಿದ ಬೋಟ್‌ಗಳು ಖಾಲಿಯಾಗಿ ವಾಪಸ್ ದಡಕ್ಕೆ ಬರುತ್ತಿರುವುದರಿಂದ ಮೀನುಗಾರ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿನಿತ್ಯ ಕಾದು ಕಾದು ಸುಸ್ತಾಗಿದ್ದು ಜೀವನ ನಡೆಸಲು ಬಹಳ ತೊಂದರೆಯಾಗಿದೆ.