ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಭಾನುವಾರ ಭಕ್ತರ ದಟ್ಟಣೆ ಕಂಡು ಬಂತು. 
ಉಡುಪಿ

ಕುಕ್ಕೆಯಲ್ಲಿ ಭಕ್ತ ಜನಸಾಗರ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುದ್ಧ ಷಷ್ಠಿಯ ದಿನವಾದ ಭಾನುವಾರ ಅತ್ಯಧಿಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಸಹಸ್ರಾರು ಭಕ್ತರು ವಾರಾಂತ್ಯದ ದಿನ ಕ್ಷೇತ್ರಕ್ಕಾಗಮಿಸಿ ಸೇವಾದಿಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು.
ದೇವಳದ ಹೊರಾಂಗಣದಲ್ಲಿ 6 ಪಾಳಿಯ ಸರತಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಮಾಡಿದರು. ದೇವಳದ ಗೋಪುರದ ಮುಂಭಾಗದಿಂದಲೇ ಭಕ್ತ ಸಮೂಹ ಜಮಾಯಿಸಿ ನಿಲ್ಲಬೇಕಾಯಿತು. ಆಶ್ಲೇಷ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಶೇಷ ಸೇವೆ, ಕಾರ್ತಿಕ ಪೂಜೆ, ಮಹಾಪೂಜೆ, ಮಹಾಭಿಷೇಕ ಮೊದಲಾದ ಸೇವೆಗಳು ಅಧಿಕವಾಗಿ ನಡೆಯಿತು.
ಷಣ್ಮುಖ ಪ್ರಸಾದ ಭೋಜನ ಶಾಲೆ, ಭಕ್ತರ ಬಿಡಾರ, ಶೃಂಗೇರಿ ಮಠಗಳಲ್ಲಿ ಭಕ್ತರಿಗೆ ಭೋಜನ ಪ್ರಸಾದ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಮಧ್ಯಾಹ್ನದ ಅನ್ನಪ್ರಸಾದಕ್ಕೆ ಬಫೆ ಮಾದರಿ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಳದ ಪರಿಸರ ಹಾಗೂ ಪಟ್ಟಣ ಸುತ್ತ ಎಲ್ಲ ಕಡೆ ಭಕ್ತಾದಿಗಳ ವಾಹನಗಳು ಪಾರ್ಕಿಂಗ್ ಪ್ರದೇಶಗಳು ತುಂಬಿದ್ದವು. ದೇವಳದ ರಥಬೀದಿ, ಧರ್ಮಸಮ್ಮೇಳನ ಮಂಟಪ, ಹೊರಾಂಗಣ, ಒಳಾಂಗಣ, ಆದಿಸುಬ್ರಹ್ಮಣ್ಯಗಳಲ್ಲಿ ಭಕ್ತ ದಟ್ಟಣೆ ಕಂಡು ಬಂತು.