ಉಡುಪಿ ಮಣಿಪಾಲದ ಸಮೀಪದ ಕೊಡಂಗೆ ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ತಿರುವಿನಲ್ಲಿ ತೋಡಿಗೆ ಉರುಳಿದ ಶಾಲಾ ವಾಹನ.
* ತೋಡಿಗೆ ಉರುಳಿದ ಶಾಲಾ ವಾಹನ
* ಓರ್ವ ವಿದ್ಯಾರ್ಥಿನಿಗೆ ತೀವ್ರ ಗಾಯ
ಉಡುಪಿ: ಮಣಿಪಾಲ ಸರಳಬೆಟ್ಟು ಸಮೀಪದಲ್ಲಿ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಶಾಲಾ ವಾಹನ ಪಲ್ಟಿಯಾಗಿ 4 ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ (ಜು.10) ಬೆಳಗ್ಗೆ ಸಂಭವಿಸಿದೆ.
ಅಪಘಾತಕ್ಕೊಳಗಾಗಿರುವ ಬಸ್ ಮಣಿಪಾಲದಲ್ಲಿರುವ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಾಹನವಾಗಿದ್ದು, ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ಕೊಡಂಗೆ ದೇವಸ್ಥಾನದ ಸಮೀಪದ ತಿರುವಿನಲ್ಲಿ ರಿವರ್ಸ್ ತೆಗೆದುಕೊಳ್ಳವಾಗ ಮಣ್ಣು ಕುಸಿದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ತೋಡಿಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಬಸ್ನಲ್ಲಿ 14ಕ್ಕೂ ಹೆಚ್ಚು ಮಕ್ಕಳಿದ್ದು, ಅದರಲ್ಲಿ ಏಳು ಮಕ್ಕಳಿಗೆ ಗಾಯಗಳಾಗಿವೆ. ಓರ್ವ ವಿದ್ಯಾರ್ಥಿನಿಗೆ ತೀವ್ರ ಗಾಯವಾಗಿದೆ. ಉಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮಕ್ಕಳನ್ನು ಮಣಿಪಾಲದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.
ಆಸ್ಪತ್ರೆಗೆ ಶಾಸಕ ಯಶ್ಪಾಲ್ ಭೇಟಿ
ಶಾಲಾ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಗಳು ಗಾಯಗೊಂಡ ಮಾಹಿತಿ ತಿಳಿಯುತ್ತಿದ್ದಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಕುರಿತು ವೈದ್ಯರು ಹಾಗೂ ಪಾಲಕರಲ್ಲಿ ಮಾಹಿತಿ ಪಡೆದರು. ಒಂದು ತಿಂಗಳ ಅವಧಿಯಲ್ಲಿ ಉಡುಪಿ ನಗರದಲ್ಲಿ ಮೂರು ಶಾಲೆಗಳ ಬಸ್ ಅಪಘಾತಕ್ಕೊಳಗಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರಿಗೆ, ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರಮುಖರು ನಿಯಮಾವಳಿಗಳ ಪಾಲನೆಗೆ ವಿಶೇಷ ಆದ್ಯತೆ ನೀಡುವಂತೆ ತಿಳಿಸಿದರು. ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಕಾರ್ಯದರ್ಶಿ ಗುರುರಾಜ್ ಭಂಡಾರಿ, ಯುವ ಮೋರ್ಚಾದ ಅಧ್ಯಕ್ಷ ಶ್ರೀವತ್ಸ, ಪದಾಧಿಕಾರಿ ನಿತಿನ್ ಪೈ ಇತರರಿದ್ದರು.
ಶಾಲಾ ವಾಹನಗಳ ಅಪಘಾತ ಪ್ರಕರಣದಲ್ಲಿ ಮೊದಲನೇಯದ್ದು ಚಾಲಕನಿಗೆ ಹೃದಯಾಘಾತದಿಂದ ಆಗಿತ್ತು. ಎರಡನೇಯದ್ದು ವಾಹನದ ಕಂಡಕ್ಟರ್ ಬಸ್ ಚಲಾಯಿಸುತ್ತಿದ್ದಾಗ ಅಪಘಾತವಾಗಿದ್ದು, ಆತನನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಶುಕ್ರವಾರ ನಡೆದ 3ನೇ ಅಪಘಾತವು ವಾಹನ ರಿವರ್ಸ್ ತೆಗೆದುಕೊಳ್ಳುವಾಗ ಸಂಭವಿಸಿದೆ. ಚಾಲಕನ ಬಳಿ ಚಾಲನಾ ಪರವಾನಗಿ ಇದ್ದು, ವಾಹನವೂ ಸಹ ಫಿಟ್ನೆಸ್ ಹೊಂದಿದೆ. ಕಳೆದ ವಾರ ಎಲ್ಲ ಶಾಲಾ ವಾಹನಗಳನ್ನು ನಾವು ಪರಿಶೀಲಿಸಿದ್ದೇವೆ. ಫಿಟ್ನೆಸ್ ಇಲ್ಲದ ವಾಹನಗಳಿಗೆ ಎಫ್ ಸಿ ಕೊಡದಂತೆ ಸಾರಿಗೆ ಅಧಿಕಾರಿಗಳಿಗೆ ತಿಳಿಸಲಾಗುವುದು.
— ಹರಿರಾಮ್ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ.
ಶಾಲಾ ಬಸ್ ಚಾಲಕನ ವಿರುದ್ಧ ಕೇಸ್
ಉಡುಪಿ: ಮಣಿಪಾಲದ ಕೊಡಂಗೆ ಬಳಿ ಶುಕ್ರವಾರ ಸಂಭವಿಸಿದ್ದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲಾ ವಾಹನದ ಬಸ್ ಅಪಘಾತ ಘಟನೆಗೆ ಸಂಬಂಧಿಸಿ ಚಾಲಕ ಬಸವ ಎಂಬಾತನ ವಿರುದ್ಧ ದೂರು ನೀಡಲಾಗಿದೆ. ಅಪಘಾತಕ್ಕೊಳಗಾದ ಶಾಲಾ ವಾಹನದ ಕೇರ್ ಟೇಕರ್ ಆಗಿ ಕೆಲಸ ಮಾಡಿಕೊಂಡಿದ್ದ ಪರ್ಕಳ ಹೆರ್ಗಾ ಗ್ರಾಮದ ಸಣ್ಣಕ್ಕಿಬೆಟ್ಟು ನಿವಾಸಿ ಪ್ರವೀಣಾ ಪ್ರಕಾಶ್ ನಾಯಕ್ (43) ದೂರು ನೀಡಿದ್ದಾರೆ. ಬೆಳಗ್ಗೆ 8:30ಕ್ಕೆ ಮಾಣಿಬೆಟ್ಟು ಸರಸ್ವತಿ ನಗರದ ಗೋಳಿಕಟ್ಟೆ ಕಡೆಗಳಿಂದ 14 ಮಕ್ಕಳನ್ನು ಹತ್ತಿಸಿಕೊಂಡು ಕೊಡಂಗೆ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಮಧುಸೂದನ ಎಂಬವರ ಮನೆಯ ಬಳಿ ಬಸ್ ಬಂದಿತ್ತು. ಬಸ್ನ ಚಾಲಕ ತೀರಾ ನಿರ್ಲಕ್ಷ್ಯದಿಂದ ಒಮ್ಮೆಲೆ ವಾಹನವನ್ನು ಹಿಂದಕ್ಕೆ ತಿರುಗಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಇಳಿಜಾರು ಪ್ರದೇಶದಲ್ಲಿದ್ದ ತೋಡಿಗೆ ಬಿದ್ದಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಮಣಿಪಾಲ ಸಮೀಪದ ಕೊಡಂಗೆಯಲ್ಲಿ ಶುಕ್ರವಾರ ಸಂಭವಿಸಿದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲಾ ವಾಹನದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಭೇಟಿಯಾದ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಆರೋಗ್ಯ ವಿಚಾರಿಸಿದರು. ಬಾಲಕಿಗೆ ಹಾಗೂ ಪಾಲಕರಿಗೆ ಧೈರ್ಯ ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉಪಾಧ್ಯಕ್ಷರಾದ ಸುಕೇಶ್ ಕುಂದರ್, ಶರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಚಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜಯ್ ಆಚಾರ್ಯ ಇದ್ದರು.