ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜ್ ಕುಮಾರ್ ಶೆಟ್ಟಿ ಮಾತನಾಡಿದರು. ಪ್ರಮೋದ್ ರೈ ಪಳಜೆಮನೆ, ಸಂತೋಷ್ ಕುಲಾಲ್ ಪಕ್ಕಾಲು, ದಿನೇಶ್ ಪೂಜಾರಿ, ಲಲಿತಾಂಬಾ ಗೌಡ ಇದ್ದರು.
* ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಸ್ಪಷ್ಟನೆ
* ಮಾಜಿ ಸದಸ್ಯ ಸರ್ವೇಗಾರ್ನ ವರ್ತನೆಗೆ ಅಸಮಾಧಾನ
ಉಡುಪಿ: ಪೆರ್ಡೂರಿನ ಶ್ರೀ ಅನಂತಪದ್ಮನಾಭ ದೇವಸ್ಥಾನದ ರದ್ದುಗೊಂಡ ಪೆರ್ಡೂರು ದೇವಳದ ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ
ಸುರೇಶ್ ಸರ್ವೇಗಾರ್ ಮಾಡಿರುವ ಎಲ್ಲ ಆರೋಪಗಳೂ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರ. ಅವರು ಹೇಳಿರುವುದೆಲ್ಲ ಸುಳ್ಳು ಎನ್ನುವುದಕ್ಕೆ ನಾವು ದೇವಳದಲ್ಲಿಯೇ ಇರುವ ದಾಖಲೆಗಳ ಪ್ರತಿಯೊಂದಿಗೆ ಅಧಾರ ಸಹಿತವಾಗಿ ಸ್ಪಷ್ಟೀಕರಣ ನೀಡುತ್ತಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆಮನೆ ಸ್ಪಷ್ಟನೆಯ ಪ್ರತಿಕ್ರಿಯೆ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಮಾ.14) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಸುರೇಶ್ ಸೇರ್ವೆಗಾರ್ ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿ ಕರೆದು ದೇವಳದ ಆಡಳಿತದ ಬಗ್ಗೆ, ವ್ಯವಸ್ಥಾಪನಾ ಸಮಿತಿ ಬಗ್ಗೆ ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಇದನ್ನು ಪತ್ರಿಕೆ, ದೃಶ್ಯ ಮಾಧ್ಯಮದಲ್ಲಿ ನೋಡಿದ ನಾವು ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಸರಿಯಾದ ಮಾಹಿತಿ ತಲುಪಬೇಕೆಂಬ ನಿಟ್ಟಿನಲ್ಲಿ ದಾಖಲೆ ಸಹಿತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೇವೆ ಎಂದರು.
ದೇವಸ್ಥಾನದಲ್ಲಿ ಬೇಡ ರಾಜಕೀಯ
ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜ್ ಕುಮಾರ್ ಶೆಟ್ಟಿ ಮಾತನಾಡಿ, ಸುಳ್ಳು ಕಂತೆ ಹಿಡಿದು ದೇವಸ್ಥಾನಕ್ಕೆ ಕಳಂಕ ತರುತ್ತಿರುವ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಗೂ ಸಹ ಸುರೇಶ್ ಸೇರ್ವೆಗಾರ್ ಮತ್ತು ಅವರ ಸಂಗಡಿಗರು ತಡೆ ತರುತ್ತಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿಸಿದಂತೆ 20 ಲಕ್ಷ ರೂ. ವೆಚ್ಚದಲ್ಲಿ ಪ್ರಾಯಶ್ಚಿತ್ತ ಕಾರ್ಯ ನಾವು ಮಾಡಿದ್ದೇವೆ. ನಮ್ಮ ಬಳಿ ಎಲ್ಲ ದಾಖಲೆಯೂ ಇದೆ. ಜೀಣೋರ್ದ್ಧಾರ ಸಮಿತಿಗೆ ಶಾಸಕರು ಸಹಕಾರ ನೀಡಬೇಕು. ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ನಿಮ್ಮ ಕಾರ್ಯಕರ್ತರು ಹೇಳಿದ್ದಕ್ಕೆ ತಲೆ ಆಡಿಸಬೇಡಿ. ಶಾಸಕರಾಗಿ ನಿಮ್ಮ ಹಾಗೂ ಸರ್ಕಾರದಿಂದ ಕೂಡಲೇ ಕೆಲಸ ಕಾರ್ಯ ಮಾಡಿಸಿಕೊಳ್ಳಲು ವಿನಯಕುಮಾರ್ ಸೊರಕೆ ಅವರ ಸಹಕಾರವೂ ನಮಗೆ ಬೇಕು. ನಮ್ಮ ತಪ್ಪಿದ್ದಲ್ಲಿ ಒಪ್ಪಿಕೊಳ್ಳಲು ಸಿದ್ಧ. ಪೆರ್ಡೂರಿನ ಅಭಿವೃದ್ಧಿಯಲ್ಲಿ ಶಾಂತಾರಾಮ ಸೂಡ ಅವರ ಕೊಡುಗೆ ಅಪಾರ. ಅವರ ವಿರುದ್ಧವೂ ಸಹ ಆರೋಪ ಮಾಡಿರುವುದು ನಮಗೆ ನೋವು ತಂದಿದೆ ಎಂದರು.
ವ್ಯವಸ್ಥಾಪನಾ ಸಮಿತಿ ತಾಂತ್ರಿಕ ಸಮಿತಿಯ ಸದಸ್ಯ ಸಂತೋಷ್ ಕುಲಾಲ್ ಪಕ್ಕಾಲು, ವಿವಿಧ ದಾಖಲೆಗಳ ಮೂಲಕ ಅಭಿವೃದ್ಧಿ ಕಾರ್ಯದ ಕುರಿತಾಗಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ ಪೂಜಾರಿ, ಲಲಿತಾಂಬಾ ಗೌಡ ಇದ್ದರು.