ಉಪ್ಪಿನಂಗಡಿ ಶಾಲಾ ರಸ್ತೆಯ ತಿರುವಿನಲ್ಲಿ ಕೆಸರು ತುಂಬಿರುವುದು.
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಮತ್ತು ಕುವಾರಧಾರಾ ನದಿಗಳ ಸಂಗಮ ತಾಣ, ನೆರೆ ಪೀಡಿತ ಪ್ರದೇಶವಾಗಿರುವ ಉಪ್ಪಿನಂಗಡಿಯಲ್ಲಿ ಜೂನ್ ಅರ್ಧ ಕಳೆದರೂ ಇದುವರೆಗೆ ನೆರೆ ಮುಂಜಾಗ್ರತಾ ಸಭೆ ನಡೆಯದಿರುವುದು ಹಾಗೂ ಆಡಳಿತ ವ್ಯವಸ್ಥೆಯೂ ಮೌನವಾಗಿರುವುದು ಸ್ಥಳೀಯರನ್ನು ಅಸಮಾಧಾನಗೊಳಿಸಿದೆ.
ಪ್ರತಿ ವರ್ಷವೂ ಮಳೆಗಾಲ ಆರಂಭಗೊಳ್ಳುವ ಮೊದಲು ಉಪ್ಪಿನಂಗಡಿಯಲ್ಲಿ ನೆರೆ ಮುಂಜಾಗ್ರತಾ ಸಭೆ ಕರೆಯಲಾಗುತ್ತಿದ್ದು, ಮಳೆಗಾಲದ ಸಂಭಾವ್ಯ ಅಪಾಯಗಳ ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಲಾಗುತ್ತಿತ್ತು. ಈ ಬಾರಿ ಉಪ್ಪಿನಂಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಕೈಗೊಂಡಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿಯೂ ದೊರೆತಿಲ್ಲ ಹಾಗೂ ಸಭೆಯೂ ನಡೆದಿಲ್ಲ.
ಉಪ್ಪಿನಂಗಡಿ ಭಾಗದ ಚರಂಡಿಗಳಲ್ಲಿ ಹೂಳು ತೆಗೆಯದೇ ಇರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ತ್ಯಾಜ್ಯ ನಿರ್ವಹಣೆ ಮತ್ತು ಗ್ರಾಮದ ಸ್ವಚ್ಚತೆ ನೆಲೆಗಟ್ಟಿನಲ್ಲಿ ‘ಸ್ವಚ್ಚ ಗ್ರಾಮ ಪುರಸ್ಕಾರ’ ಪಡೆದಿದ್ದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಗೆ ತ್ಯಾಜ್ಯ ಸಂಗ್ರಹ ಹಾಗೂ ನಿರ್ವಹಣೆಯೇ ಹೊರೆಯಾಗಿದೆ. ನಿತ್ಯವೂ ನಡೆಯುತ್ತಿದ್ದ ತ್ಯಾಜ್ಯ ಸಂಗ್ರಹ ಈಗ ವಾರಕ್ಕೆ ಒಂದು ಬಾರಿಯಂತೆ ನಡೆಯುತ್ತಿದೆ. ಹಲವೆಡೆ ಹಸಿ ತ್ಯಾಜ್ಯಗಳು ಕೊಳೆತು ದುರ್ನಾತ ಹರಡುವುದರ ಜತೆಗೆ ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಭೀತಿಯೂ ಇದೆ.
ಆಡಳಿತಾಧಿಕಾರಿ ನಿರ್ಲಕ್ಷ್ಯ
ಸ್ಥಳೀಯ ಪಂಚಾಯಿತಿಯಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಇಲ್ಲವಾಗಿರುವುದರಿಂದ ಆಡಳಿತಾಧಿಕಾರಿಗಳ ಆಡಳಿತದಲ್ಲಿ ನಿರ್ಲಕ್ಷ್ಯವಿರುವುದು ಸ್ಪಷ್ಟವಾಗಿದ್ದು, ಜನರ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಸಂವೇದನಾಶೀಲತೆ ಇಲ್ಲದಿರುವುದರಿಂದ ಅಭಿವೃದ್ಧಿ ಕಾರ್ಯಗಳು ಸಾಗುತ್ತಿಲ್ಲ. ಉಪ್ಪಿನಂಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆಗಳ ಸಂಖ್ಯೆ ಅಧಿಕವಿದೆ.
ತ್ಯಾಜ್ಯ ನಿರ್ವಹಣೆ, ಚರಂಡಿಗಳ ಹೂಳು ತೆರವು ಸಹಿತ ಮಳೆಗಾಲದಲ್ಲಿ ನೆರೆ ಮುಂಜಾಗ್ರತಾ ಹಾಗೂ ಆರೋಗ್ಯ ರಕ್ಷಣೆ ಕ್ರಮದ ನೆಲೆಯಲ್ಲಿ ಆಡಳಿತ ವ್ಯವಸ್ಥೆ ನೈಜ ಕಾಳಜಿ ವಹಿಸಬೇಕು. ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವತ್ತ ಆಡಳಿತ ವ್ಯವಸ್ಥೆಯಿಂದ ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸುತ್ತಿದ್ದೇವೆ.
— ಲೋಕೇಶ್ ಆಚಾರ್ಯ ಉಪ್ಪಿನಂಗಡಿ ವರ್ತಕ ಸಂದ ಪದಾಧಿಕಾರಿ