ಸೇತುವೆಯ ನಡುಭಾಗದಲ್ಲಿ ಕಾಂಕ್ರೀಟ್ ಕಳಚಿ ನಿರ್ಮಾಣವಾದ ಹೊಂಡ.  
ಉಡುಪಿ

ಕಿರು ಸೇತುವೆಯಲ್ಲಿ ಬಾಯ್ತೆರೆದ ಹೊಂಡ

ಇಂದಿರಾ ಎನ್ ಕೆ
ಶಶಿ ಕುತ್ಯಾಳ ಈಶ್ವರಮಂಗಲ
ಕಾವು-ಈಶ್ವರಮಂಗಲ-ಪಳ್ಳತ್ತೂರು ಅಂತಾರಾಜ್ಯ ಸಂಪರ್ಕ ರಸ್ತೆಯ ಈಶ್ವರಮಂಗಲ ಸಮೀಪ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಕಾಂಕ್ರೀಟ್ ಕಿರು ಸೇತುವೆಯ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು, ಕಾಮಗಾರಿ ಕಳಪೆ ಎಂಬ ಈಶ್ವರಮಂಗಲ ನಿವಾಸಿಗಳ ಆರೋಪ ಸತ್ಯವಾಗಿದೆ.
ಈಶ್ವರಮಂಗಲ ಪಳ್ಳತ್ತೂರು ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಈಶ್ವರಮಂಗಲ ಶಾಖಾ ಕಟ್ಟಡದ ಸಮೀಪ ಹಳೇ ಮೋರಿಯಿದ್ದ ಸ್ಥಳದಲ್ಲಿ ಕಳೆದ ಮಳೆಗಾಲದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಸಾರ್ವಜನಿಕರ ಪ್ರತಿಭಟನೆ ಕಾರಣದಿಂದ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯಲ್ಲಿ ನಿರ್ಮಾಣವಾಗಿದ್ದ ಹೊಂಡಕ್ಕೆ ಜಲ್ಲಿ, ಮರಳು ತುಂಬಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದರು. ಮಳೆಗಾಲದ ಮುಗಿದ ಬಳಿಕವೂ ಅಲ್ಲಿ ಮತ್ತೊಮ್ಮೆ ಹೊಂಡ ನಿರ್ಮಾಣವಾಗಿ ಮೋರಿಯೇ ಕುಸಿಯುವ ಹಂತಕ್ಕೆ ತಲುಪಿದ್ದರಿಂದ ಎಚ್ಚೆತ್ತುಕೊಂಡ ಸ್ಥಳೀಯರು ಎರಡನೇ ಬಾರಿ ಪ್ರತಿಭಟನೆ ನಡೆಸಿದ್ದರು.

ಸಾರ್ವಜನಿಕರ ಎಚ್ಚರಿಕೆ ನಿರ್ಲಕ್ಷ್ಯ

ಸ್ಥಳೀಯರ ಪ್ರತಿಭಟನೆಗಳ ಬಿಸಿಯಿಂದಾಗಿ ಲೋಕೋಪಯೋಗಿ ಇಲಾಖೆಯು ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಂಡ ಎರಡೇ ತಿಂಗಳಲ್ಲಿ ಸೇತುವೆ ಮಧ್ಯೆ ಕಾಂಕ್ರೀಟ್ ಕಳಚಿ ಹೊಂಡ ನಿರ್ಮಾಣವಾಗಿದೆ. ಕಾಮಗಾರಿ ನಡೆಯುತ್ತಿದ್ದಾಗಲೇ ಸ್ಥಳೀಯರು ಕಳಪೆ ಕಾಮಗಾರಿ ಎಂದು ಆರೋಪಿಸಿದ್ದು, ಕ್ಯೂರಿಂಗ್ ಕೂಡ ಸೂಕ್ತವಾಗಿ ನಡೆಸಿಲ್ಲ ಎಂದು ಅಧಿಕಾರಿಗಳ ಬಳಿ ತಿಳಿಸಿದ್ದರು. ಇದನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ಕಾಂಕ್ರೀಟ್ ಕಳಪೆಯಾಗಿದೆ.
ಈಶ್ವರ ಮಂಗಲ ಪಳ್ಳತ್ತೂರು ಅಂತಾರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ. ಪುತ್ತೂರು-ದೇಲಂಪಾಡಿ, ಪುತ್ತೂರು-ಪಳ್ಳತ್ತೂರು, ಪುತ್ತೂರು-ಗಾಳಿಮುಖ, ಪುತ್ತೂರು-ಕುಂಟಾರು ನಡುವೆ ಬಸ್ಸುಗಳು ಹಾಗೂ ಲಾರಿಗಳ ಸಹಿತ ನೂರಾರು ವಾಹನಗಳು ನಿತ್ಯವೂ ಸಂಚರಿಸುತ್ತವೆ. ಕಳಪೆ ಕಾಮಗಾರಿಯಿಂದಾಗಿ ಭವಿಷ್ಯದಲ್ಲಿ ಭಾರಿ ದುರಂತಗಳಾಗುವ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಪ್ಪೊಪ್ಪಿಕೊಂಡ ಅಧಿಕಾರಿ

ಸೇತುವೆಯ ಮಧ್ಯ ಭಾಗದಲ್ಲಿ ಕಾಂಕ್ರೀಟ್ ಕಳಚಿಬಿದ್ದು ಹೊಂಡ ನಿರ್ಮಾಣಗೊಂಡಿರುವುದು ಶನಿವಾರ ಬೆಳಕಿಗೆ ಬಂದಿದೆ. ಕೂಡಲೇ ರೈತ ಸಂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಕರ್ನೂರುಗುತ್ತು, ಕಾಂಗ್ರೆಸ್ ಕಿಸಾನ್ ಟಕದ ತಾಲೂಕು ಅಧ್ಯಕ್ಷ ಅಬ್ದುಲ್ ರಹಿವಾನ್ ಹಾಜಿ ಮೇನಾಲ, ಸ್ಥಳೀಯರಾದ ರಾಹ ಬಿಸಿ ಬೆಳ್ಳಿಚಡವು, ಹಮೀದ್ ಮೇನಾಲ, ಸತೀಶ್ ಈಶ್ವರಮಂಗಲ, ಪವಿತ್ರ ಗೌಡ, ಸತೀಶ್ ಪೂಜಾರಿ ಸುರುಳಿಮೂಲೆ, ಅಬ್ದುಲ್ಲಾ ಮೆಣಸಿನಕಾನ, ದಯಾನಂದ ಗೌಡ ಕೆಮ್ಮತ್ತಡ್ಕ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಲೋಕೋಪಯೋಗಿ ಇಂಜಿನಿಯರ್ ತೌಫಿಕ್ ಕಾಮಗಾರಿಯಲ್ಲಿರುವ ಲೋಪವನ್ನು ಒಪ್ಪಿಕೊಂಡು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಕಾಮಗಾರಿಯ ವೇಳೆಯೇ ನಾವು ಕಳಪೆ ಕಾಮಗಾರಿಯಾಗಿದೆ ಎಂದು ಎಚ್ಚರಿಸಿದ್ದೆವು. ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ಹಲವಾರು ಬಾರಿ ಕರೆವಾಡಿ ತಿಳಿಸಿದ್ದರೂ ಅವರು ನಿರ್ಲಕ್ಷ್ಯ ವಾಡಿದ್ದಾರೆ. ಸಮರ್ಪಕ ರೀತಿಯ ಕಬ್ಬಿಣದ ಸರಳು ಮತ್ತು ಕಾಂಕ್ರೀಟ್ ಬಳಕೆ ವಾಡದೆ ಕಾಮಗಾರಿ ಕಳಪೆಯಾಗಿ ನಿರ್ವಹಿಸಿದ್ದರಿಂದ ಸಮಸ್ಯೆ ಉಂಟಾಗಿದೆ. ಲೋಕೊಪಯೋಗಿ ಇಂಜಿಯರ್‌ನ ಭರವಸೆ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿದ್ದೇವೆ. ದುರಸ್ತಿಗೊಳಿಸದಿದ್ದರೆ ಇನ್ನೊಮ್ಮೆ ಪ್ರತಿಭಟನೆಗಿಳಿಯುತ್ತೇವೆ.

— ಅಮರನಾಥ ಆಳ್ವ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ